ಬಿಪಿಎಸ್ಸಿ ಪರೀಕ್ಷಾ ಹಗರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆಯು ಯುವಕರ ಹಕ್ಕುಗಳನ್ನು ಹರಣಗೊಳಿಸುವ ಆಯುಧವಾಗಿದ್ದು, ಇಂತಹ ಘಟನೆಗಳು ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಪ್ರತಿನಿತ್ಯ ನಡೆಯುತ್ತಿದೆ. ನಾನು ಬಿಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಸಮಯವನ್ನೂ ಕಳೆದಿದ್ದರು. ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗಿನ ತಮ್ಮ ಸಂವಾದದ ವೀಡಿಯೊವನ್ನು ಅವರು ತಮ್ಮ ಯೂಟ್ಯೂಬ್ ವಾಹಿನಿಯಲ್ಲೂ ಹಂಚಿಕೊಂಡಿದ್ದಾರೆ.
ಬಿಪಿಎಸ್ಸಿ ಪರೀಕ್ಷಾ ಹಗರಣದಿಂದ ತೊಂದರೆಗೊಳಗಾಗಿರುವ ಹಾಗೂ ಪೊಲೀಸರಿಂದ ಲಾಠಿ ಚಾರ್ಜ್ ಅನುಭವಿಸಿರುವ ವಿದ್ಯಾರ್ಥಿಗಳನ್ನು ತಾವು ಇತ್ತೀಚೆಗೆ ಭೇಟಿ ಮಾಡಿದ್ದ ವೀಡಿಯೊವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಲಾಬಿಕೋರರಿಂದ ನಡೆಯುತ್ತಿರುವ ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕುರಿತು ಪ್ರತಿಭಟನಾನಿರತ ವಿದ್ಯಾರ್ಥಿಗಳು ತನಗೆ ವಿಸ್ತೃತವಾಗಿ ವಿವರಿಸಿದರು ಎಂದು ಅವರು ಆ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
“ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆಯುತ್ತಾರೊ ಇಲ್ಲವೊ, ಆದರೆ, ಅವು ನಿಶ್ಚಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ವಿದ್ಯಾರ್ಥಿಗಳು ವಿಷಕಾರಿ ವರ್ತುಲದಲ್ಲಿ ಸಿಲುಕಿಕೊಂಡಿದ್ದು, ಅವರಿಗೆ ತಾವು ಗಳಿಸುವ ಅಂಕಗಳಿಂದ ಉದ್ಯೋಗ ದೊರೆಯುತ್ತದೆ ಎಂಬ ಖಾತರಿಯೇ ಇಲ್ಲದಂತಾಗಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.