ಬಿಜೆಪಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ನಾಯಕರನ್ನು ಹೊರದಬ್ಬಬೇಕು : ಗುಜರಾತ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ
ರಾಹುಲ್ ಗಾಂಧಿ | PTI
ಅಹ್ಮದಾಬಾದ್: ಬಿಜೆಪಿಗಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಹೊರದಬ್ಬವುದು ಅಗತ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ತನ್ನ ಎರಡು ದಿನಗಳ ಗುಜರಾತ್ ಭೇಟಿಯ ಎರಡನೇ ದಿನ ಅಹ್ಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಗುಜರಾತ್ ಕಾಂಗ್ರೆಸ್‌ನಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು ವರ್ಗಕ್ಕೆ ಸೇರಿದವರು, ಜನರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾರೆ, ಅವರಿಗಾಗಿ ಹೋರಾಡುತ್ತಾರೆ, ಅವರನ್ನು ಗೌರವಿಸುತ್ತಾರೆ ಮತ್ತು ಹೃದಯದಲ್ಲಿ ಕಾಂಗ್ರೆಸ್‌ನ ಸಿದ್ಧಾಂತವನ್ನು ಇಟ್ಟುಕೊಂಡಿದ್ದಾರೆ. ಇನ್ನೊಂದು ವರ್ಗಕ್ಕೆ ಸೇರಿದವರು, ಜನರೊಂದಿಗಿನ ಸಂಪರ್ಕವನ್ನು ಕಡಿದುಕೊಂಡು ದೂರವೇ ಉಳಿಯುತ್ತಾರೆ, ಜನರನ್ನು ಗೌರವಿಸುವುದಿಲ್ಲ ಮತ್ತು ಅದರ ಅರ್ಧದಷ್ಟು ಜನರು ಬಿಜೆಪಿಯೊಂದಿಗೆ ಇದ್ದಾರೆ’’ ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷವು ತನ್ನ ಜವಾಬ್ದಾರಿಗಳನ್ನು ನಿಭಾಯಿಸುವವರೆಗೆ ಗುಜರಾತ್ ಜನರು ಅದಕ್ಕೆ ಮತ ಹಾಕುವುದಿಲ್ಲ ಎಂದು ರಾಹುಲ್ ಹೇಳಿದರು. ಗುಜರಾತ್ ಜನರು ನೂತನ ಚಿತ್ರಣವೊಂದನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದ ಅವರು, ಯಾಕೆಂದರೆ ಮೂರು ದಶಕಗಳಿಗೂ ಅಧಿಕ ಅವಧಿಯ ಬಿಜೆಪಿ ಆಡಳಿತದಲ್ಲಿ ಅವರಿಗೆ ತೋರಿಸಲಾಗಿರುವ ಚಿತ್ರಣವು ವಿಫಲವಾಗಿದೆ ಎಂದರು.
‘‘ನಮ್ಮ ಜವಾಬ್ದಾರಿಗಳನ್ನು ನಾವು ನಿಭಾಯಿಸುವವರೆಗೆ ಗುಜರಾತ್ ಜನರು ಚುನಾವಣೆಗಳಲ್ಲಿ ನಮ್ಮನ್ನು ಗೆಲ್ಲಿಸುವುದಿಲ್ಲ. ನಮ್ಮ ಜವಾಬ್ದಾರಿಗಳನ್ನು ಈಡೇರಿಸದ ಹೊರತು ನಮ್ಮನ್ನು ಅಧಿಕಾರಕ್ಕೆ ತರಬೇಕು ಎಂಬುದಾಗಿ ನಾವು ಗುಜರಾತ್ ಜನರನ್ನು ಕೇಳಲೂಬಾರದು. ನಾವು ಇದನ್ನು ಮಾಡಿದ ದಿನ, ಗುಜರಾತ್ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಖಾತರಿಯನ್ನು ನಾನು ನಿಮಗೆ ನೀಡುತ್ತೇನೆ’’ ಎಂದು ರಾಹುಲ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.