×
Ad

ಪ್ರತಿಭಟನಾ ನಿರತ ರೈತರ ಜತೆ ಮಾತುಕತೆಗೆ ಸಿದ್ಧ; ಆದರೆ ಹೊಸ ವಿಷಯ ಪ್ರಸ್ತಾವ ಇಲ್ಲ: ಕೇಂದ್ರ ಸರಕಾರ

Update: 2024-02-14 10:09 IST

Photo: twitter.com/timesofindia

ಹೊಸದಿಲ್ಲಿ: ಬೇಡಿಕೆಗಳ ಪಟ್ಟಿಗೆ ಹೊಸ ವಿಷಯಗಳನ್ನು ಸೇರಿಸಬಾರದು ಎಂಬ ಷರತ್ತು ವಿಧಿಸಿರುವ ಕೇಂದ್ರ ಸರಕಾರ, ಪ್ರತಿಭಟನಾ ನಿರತ ರೈತರ ಜತೆ ಮಾತುಕತೆಗೆ ಸಿದ್ಧ ಎಂದು ಮಂಗಳವಾರ ಸ್ಪಷ್ಟಪಡಿಸಿದೆ. ಕೆಲ ನಿರ್ದಿಷ್ಟ ಶಕ್ತಿಗಳು ರಾಜಕೀಯ ಲಾಭಕ್ಕಾಗಿ ರೈತರ ಮಾನಹಾನಿ ಮಾಡುವ ಪ್ರಯತ್ನದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ.

"ಚಂಡೀಗಢದಲ್ಲಿ ನಡೆದ ಎರಡು ಸುತ್ತುಗಳ ಮಾತುಕತೆಯಲ್ಲಿ ರೈತರ ಹಲವು ಬೇಡಿಕೆಗಳಿಗೆ ನಾವು ಒಪ್ಪಿಗೆ ನೀಡಿದ್ದೇವೆ. ಆದರೆ ಕೆಲ ನಿರ್ದಿಷ್ಟ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಮಾತುಕತೆ ಮುಂದುವರಿದಿದೆ" ಎಂದು ರೈತರು ಮಾತುಕತೆಯಿಂದ ಹೊರನಡೆದ ಮರುದಿನ ಕೃಷಿ ಸಚಿವ ಅರ್ಜುನ್ ಮುಂಡಾ ಸ್ಪಷ್ಟಪಡಿಸಿದ್ದಾರೆ.

ಕಳೆದ ಪ್ರತಿಭಟನೆ ವೇಳೆ ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿ ಹಿಂಪಡೆಯಲು ಸರ್ಕಾರ ಒಪ್ಪಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಹಲವು ಪ್ರಕರಣಗಳನ್ನು ಈಗಾಗಲೇ ವಾಪಾಸು ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಭಟನಾಕಾರರು ಹೊಸ ವಿಷಯಗಳನ್ನು ಸೇರಿಸಬಾರದು ಮತ್ತು ತಕ್ಷಣಕ್ಕೆ ನಿರ್ಣಯಕ್ಕೆ ಬರಬಾರದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದಾರೆ.

"ಭಾರತ ವಿಶ್ವ ವ್ಯಾಪಾರ ಸಂಸ್ಥೆಯಿಂದ ಹೊರಬರಬೇಕು ಮತ್ತು ಮುಕ್ತ ವ್ಯಾಪಾರ ಒಪ್ಪಂದ ರದ್ದುಪಡಿಸಬೇಕು ಎನ್ನುವ ಬಗ್ಗೆ ನೀವು ಮಾತನಾಡುವುದಾದರೆ, ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸುವುದು ತಡೆದರೆ, ಕೃಷಿ ತ್ಯಾಜ್ಯ ಉರಿಸುವ ವಿಚಾರ ಹೊರಗಿಡಬೇಕು ಎನ್ನುವುದಾದಲ್ಲಿ ಅಥವಾ ಹವಾಮಾನ ವಿಚಾರದಿಂದ ಕೃಷಿಯನ್ನು ಹೊರಗಿಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಅದು ಒಂದು ದಿನದ ಚರ್ಚೆಯಾಗಲು ಸಾಧ್ಯವಿಲ್ಲ. ಇದಕ್ಕೆ ಇತರ ರಾಜ್ಯಗಳನ್ನು ಮತ್ತು ಹಕ್ಕುದಾರರ ಜತೆಗೂ ಚರ್ಚಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಸಮಿತಿ ರಚಿಸುವ ಪ್ರಸ್ತಾವ ಮುಂದಿಟ್ಟಿದೆ" ಎಂದು ಠಾಕೂರ್ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News