ಕಡಿಮೆ ಗೋಚರತೆ | ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸರಣಿ ಅಪಘಾತ: 13 ಮಂದಿ ಮೃತ್ಯು
Photo credit: PTI
ಮಥುರಾ (ಉತ್ತರ ಪ್ರದೇಶ): ದಟ್ಟ ಮಂಜಿನಿಂದ ಗೋಚರತೆ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭಾರೀ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಬಲ್ದೇವ್ ಪೊಲೀಸ್ ಠಾಣೆ ವ್ಯಾಪ್ತಿಯ 127ನೇ ಮೈಲಿಗಲ್ಲು ಬಳಿ, ಆಗ್ರಾ–ನೋಯ್ಡಾ ಮಾರ್ಗದಲ್ಲಿ ಬೆಳಿಗ್ಗೆ ಸುಮಾರು 4 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ದಟ್ಟ ಮಂಜಿನಿಂದ ಏಳು ಬಸ್‌ಗಳು ಹಾಗೂ ಮೂರು ಕಾರುಗಳು ಪರಸ್ಪರ ಢಿಕ್ಕಿಯಾದ ಪರಿಣಾಮ, ಕೆಲವು ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ಧಾವಿಸಿ 11 ಅಗ್ನಿಶಾಮಕ ದಳಗಳನ್ನು ನಿಯೋಜಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ವಾಹನಗಳಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಮತ್ತು ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.
ರಸ್ತೆ ಸಂಪೂರ್ಣವಾಗಿ ಅಡಚಣೆಯಾದ ಹಿನ್ನೆಲೆಯಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು.
ಬಲ್ದೇವ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಂಜನಾ ಸಚನ್ ಅವರ ಪ್ರಕಾರ, ಮೃತರೆಲ್ಲರೂ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಯಾಗ್‌ರಾಜ್ ನಿವಾಸಿ 44 ವರ್ಷದ ಅಖಿಲೇಂದ್ರ ಪ್ರತಾಪ್ ಯಾದವ್ ಮತ್ತು ಮಹಾರಾಜ್‌ಗಂಜ್ ಜಿಲ್ಲೆಯ 75 ವರ್ಷದ ರಾಂಪಾಲ್ ಎಂದು ಗುರುತಿಸಲಾಗಿದೆ. ಉಳಿದ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ಡಿಕ್ಕಿಯ ಬಳಿಕ ಭಾರೀ ಸ್ಫೋಟಗಳು ಸಂಭವಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ರಕ್ಷಣಾ ಕಾರ್ಯಗಳಿಗೆ ನೆರವಾಗಿದ್ದಾರೆ. ಆಗ್ರಾ ದಾಟಿದ ನಂತರ ಬಸ್ ಹಠಾತ್ತನೆ ನಿಂತಿದ್ದು, ಬಾಗಿಲುಗಳು ಜಾಮ್ ಆದ ಕಾರಣ ಮಹಿಳೆಯರು ಮತ್ತು ಮಕ್ಕಳನ್ನು ಹೊರತೆಗೆಯಲು ಪ್ರಯಾಣಿಕರು ಬಾಗಿಲುಗಳನ್ನು ಬಲವಂತವಾಗಿ ತೆರೆಯಬೇಕಾಯಿತು ಎಂದು ಲಕ್ನೋದಿಂದ ದಿಲ್ಲಿಗೆ ತೆರಳುತ್ತಿದ್ದ ಬಸ್‌ನ ಪ್ರಯಾಣಿಕನೊಬ್ಬ ಘಟನೆಯ ಬಗ್ಗೆ ವಿವರಿಸಿದರು.
ಉತ್ತರ ಪ್ರದೇಶ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ವ್ಯಾಪಕ ಮಂಜು ಆವರಿಸಿರುವ ನಡುವೆ ಈ ಅಪಘಾತ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಆಗ್ರಾ, ಪ್ರಯಾಗ್‌ರಾಜ್, ಬರೇಲಿ ಮತ್ತು ಮೊರಾದಾಬಾದ್ ನಗರಗಳಲ್ಲಿ ಗೋಚರತೆ ಶೂನ್ಯಕ್ಕೆ ಸಮೀಪಿಸಿತ್ತು.
ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.