×
Ad

ಚೀನಾದಿಂದ ಆಮದು ಹೆಚ್ಚಳಕ್ಕೆ ಆರೆಸ್ಸೆಸ್ ಅಂಗಸಂಸ್ಥೆ ಎಸ್ಜಿಎಂ ಕಿಡಿ; ವಿದೇಶಿ ಸರಕುಗಳ ಬಹಿಷ್ಕಾರಕ್ಕೆ ಕರೆ

Update: 2025-05-31 20:59 IST

ಸಾಂದರ್ಭಿಕ ಚಿತ್ರ | PC : freepik.com

ಹೊಸದಿಲ್ಲಿ: ಆರೆಸ್ಸೆಸ್ ನ ಆರ್ಥಿಕ ಘಟಕವಾಗಿರುವ ಸ್ವದೇಶಿ ಜಾಗರಣ ಮಂಚ್(ಎಸ್ಜೆಎಂ) ಈ ಹಿಂದೆ ಚೀನಿ ಸರಕುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಆ ದೇಶದಿಂದ ಆಮದುಗಳು ಹೆಚ್ಚುತ್ತಿವೆ ಎನ್ನುವುದನ್ನು ಒಪ್ಪಿಕೊಂಡಿದೆ.

ಶುಕ್ರವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಸ್ಜೆಎಂ ಸಂಚಾಲಕ ಅಶ್ವನಿ ಮಹಾಜನ್‌ ಅವರು, ದೇಶಭಕ್ತ ಜನರು ಚೀನಾದ ಮತ್ತು ಇತರ ವಿದೇಶಿ ಸರಕುಗಳನ್ನು ಬಹಿಷ್ಕರಿಸುತ್ತಿದ್ದರೂ ಕಳೆದ ಕೆಲವು ವರ್ಷಗಳಲ್ಲಿ ಚೀನಾದಿಂದ ಆಮದು ಹೆಚ್ಚಾಗಿರುವುದು ನಿಜ ಎಂದು ಹೇಳಿದರು.

ಆಮದುಗಳ ಹೆಚ್ಚಳಕ್ಕೆ ಇ-ಕಾಮರ್ಸ್ ವೇದಿಕೆಗಳು ಮತ್ತು ವಿದೇಶಿ ಬ್ರ್ಯಾಂಡ್ ಗಳು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಾರಣವಾಗಿದೆ, ಜೊತೆಗೆ ದೇಶದ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತದ ಉದ್ಯಮ ಸಮುದಾಯದ ವಿಶ್ವಾಸದ ಕೊರತೆಯೂ ತನ್ನ ಪಾಲನ್ನು ಸಲ್ಲಿಸಿದೆ ಎಂದು ಎಸ್ಜೆಎಂ ಆರೋಪಿಸಿದೆ.

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದ ಮಹಾಜನ್‌, ಇತ್ತೀಚಿಗೆ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಸರಕುಗಳನ್ನು ಮಾರಾಟ ಮಾಡುವುದಿಲ್ಲ ಎಂಬ ಶಪಥವನ್ನು ತೊಡುವಂತೆ ವ್ಯಾಪಾರಿಗಳಿಗೆ ನೀಡಿರುವ ಕರೆಯು ಈ ಅಭಿಯಾನಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಮಂಗಳವಾರ ಗುಜರಾತಿನ ಗಾಂಧಿನಗರದಲ್ಲಿ ಮಾತನಾಡಿದ ಸಂದರ್ಭ ಮೋದಿಯವರು,‘ಸಣ್ಣ ಕಣ್ಣುಗಳ’ ಗಣೇಶ ಮೂರ್ತಿಗಳು ವಿದೇಶದಿಂದ ಆಮದಾಗುತ್ತಿರುವುದನ್ನು ಬೆಟ್ಟು ಮಾಡುವ ಮೂಲಕ ಆಮದು ಸರಕುಗಳ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದರು.‘ಗ್ರಾಮೀಣ ವ್ಯಾಪಾರಿಗಳು ಎಷ್ಟೇ ಲಾಭವಿದ್ದರೂ ತಾವು ವಿದೇಶಿ ಸರಕುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ನಾವು ಪ್ರೋತ್ಸಾಹಿಸಬೇಕು’ ಎಂದು ಹೇಳಿದ್ದರು.

ಪ್ರಧಾನಿಯವರ ಹೇಳಿಕೆಯು ಚೀನಾದ ಉತ್ಪನ್ನಗಳನ್ನು ಬೆಟ್ಟು ಮಾಡಿತ್ತು ಎಂದು ಹೇಳಿದ ಮಹಾಜನ್‌,‘ಪಾಕಿಸ್ತಾನದ ದುಸ್ಸಾಹಸಕ್ಕೆ ಉತ್ತರವಾಗಿ ನಾವು ನಡೆಸಿದ್ದ ಮಿಲಿಟರಿ ಕಾರ್ಯಾಚರಣೆಯು ನಮ್ಮ ಮಿತ್ರರು ಮತ್ತು ಶತ್ರುಗಳನ್ನು ಬೆಳಕಿಗೆ ತಂದಿದೆ. ಇತ್ತೀಚಿನ ಯುದ್ಧದಲ್ಲಿ ನಮ್ಮ ಶತ್ರುವಿಗೆ ನೆರವಾಗಿದ್ದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವುದು ಅಥವಾ ಕಡಿಮೆಗೊಳಿಸುವುದು ಸ್ವಾಗತಾರ್ಹ ನಿರ್ಧಾರವಾಗಿದೆ ’ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News