1984ರ ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಖುಲಾಸೆ
ಸಜ್ಜನ್ ಕುಮಾರ್ | Photo Credit : PTI
ಹೊಸದಿಲ್ಲಿ: 1984ರಲ್ಲಿ ದಿಲ್ಲಿಯ ಜನಕ್‌ಪುರಿ ಹಾಗೂ ವಿಕಾಸ್‌ಪುರಿ ಪ್ರದೇಶಗಳಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯವು ಗುರುವಾರ ಕಾಂಗ್ರೆಸ್ ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದೆ. ಈ ಹಿಂಸಾಚಾರದಲ್ಲಿ ಇಬ್ಬರು ಸಿಖ್ ನಾಗರಿಕರು ಮೃತಪಟ್ಟಿದ್ದಾರೆ.
ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರ ಪಾತ್ರವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚಾರಣೆಯ ವೇಳೆ, ಅವರು ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ವಾದಿಸಿದ್ದರು.
ವಿಶೇಷ ನ್ಯಾಯಾಧೀಶ ದಿಗ್ವಿಜಯ್ ಸಿಂಗ್ ಅವರು ಮೌಖಿಕವಾಗಿ ಸಂಕ್ಷಿಪ್ತ ಆದೇಶ ಪ್ರಕಟಿಸಿ ಕುಮಾರ್ ಅವರನ್ನು ಖುಲಾಸೆಗೊಳಿಸಿದರು.
1984ರ ನವೆಂಬರ್ 1ರಂದು ಜನಕ್‌ಪುರಿಯಲ್ಲಿ ಸೋಹನ್ ಸಿಂಗ್ ಹಾಗೂ ಅವರ ಅಳಿಯ ಅವತಾರ್ ಸಿಂಗ್ ಹತ್ಯೆ ಮತ್ತು ನವೆಂಬರ್ 2ರಂದು ವಿಕಾಸ್‌ಪುರಿಯಲ್ಲಿ ಗುರ್ಚರಣ್ ಸಿಂಗ್ ಅವರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣಗಳಿಗೆ ಸಂಬಂಧಿಸಿ, 2015ರ ಫೆಬ್ರವರಿಯಲ್ಲಿ ವಿಶೇಷ ತನಿಖಾ ತಂಡವು ಕುಮಾರ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.
2023ರ ಆಗಸ್ಟ್‌ನಲ್ಲಿ ನ್ಯಾಯಾಲಯವು ಕುಮಾರ್ ವಿರುದ್ಧ ಗಲಭೆ ಹಾಗೂ ದ್ವೇಷ ಪ್ರಚೋದನೆ ಆರೋಪಗಳನ್ನು ರೂಪಿಸಿತ್ತು. ಆದರೆ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಸದ್ಯ ಜೈಲಿನಲ್ಲಿರುವ ಸಜ್ಜನ್ ಕುಮಾರ್ ಅವರಿಗೆ, 1984ರ ನವೆಂಬರ್ 1ರಂದು ಸರಸ್ವತಿ ವಿಹಾರ್ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣದೀಪ್ ಸಿಂಗ್ ಹತ್ಯೆ ಪ್ರಕರಣದಲ್ಲಿ, ಕಳೆದ ವರ್ಷ ಫೆಬ್ರವರಿ 25ರಂದು ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ‘ಅಪರೂಪದ ಪ್ರಕರಣ’ದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಈ ಹತ್ಯೆ ಪ್ರಕರಣವು, 2018ರ ಡಿಸೆಂಬರ್ 17ರಂದು ದಿಲ್ಲಿ ಹೈಕೋರ್ಟ್ ಪಾಲಂ ಕಾಲೋನಿ ಪ್ರದೇಶದಲ್ಲಿ ನಡೆದ ಐದು ಜನರ ಹತ್ಯೆ ಪ್ರಕರಣದಲ್ಲಿ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಘಟನೆಯ ಮುಂದುವರಿಕೆಯಾಗಿದೆ. ಈ ಗಲಭೆಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದವು.
1984ರ ದಂಗೆಯ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ವರದಿ ಪ್ರಕಾರ, ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 587 ಎಫ್‌ಐಆರ್ ಗಳು ದಾಖಲಾಗಿದ್ದು, 2,733 ಮಂದಿ ಮೃತಪಟ್ಟಿದ್ದರು. ಈ ಪೈಕಿ 240 ಪ್ರಕರಣಗಳನ್ನು ‘ಪತ್ತೆಯಾಗದ’ ಎಂದು ಮುಚ್ಚಲಾಗಿದ್ದು, 250 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಕೇವಲ 28 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ.
ಪಾಲಂ ಕಾಲೋನಿ ಹತ್ಯೆ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಜ್ಜನ್ ಕುಮಾರ್ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.