×
Ad

Uttar Pradesh | ಮೊರಾದಾಬಾದ್‌ನಲ್ಲಿ ಮರ್ಯಾದೆಗೇಡು ಹತ್ಯೆ ಶಂಕೆ; ಅಂತರ್ಧರ್ಮೀಯ ಜೋಡಿಯ ಕೊಲೆ

ಯುವತಿಯ ಇಬ್ಬರು ಸಹೋದರರ ಬಂಧನ

Update: 2026-01-22 17:23 IST

Photo Credit : NDTV 

ಮೀರತ್: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಮತ್ತು ಯುವತಿಯ ಮೃತದೇಹಗಳು ಬುಧವಾರ ಸಂಜೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಪಕ್ಬಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಈ ಪ್ರಕರಣವನ್ನು ಮರ್ಯಾದೆ ಹತ್ಯೆಯಾಗಿ ಪೊಲೀಸರು ಶಂಕಿಸಿದ್ದಾರೆ.

ಉಮ್ರಿ ಸಬ್ಜಿಪುರ ಗ್ರಾಮದ ನಿವಾಸಿಗಳಾದ 24 ವರ್ಷದ ಮೊಹಮ್ಮದ್ ಅರ್ಮಾನ್ ಹಾಗೂ 18 ವರ್ಷದ ಕಾಜಲ್ ಸೈನಿ ಅವರ ಮೃತದೇಹಗಳು ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಹಿಂಭಾಗದಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ರವಿವಾರ ರಾತ್ರಿ ಅರ್ಮಾನ್ ಕಾಜಲ್ ಅವರನ್ನು ಭೇಟಿಯಾಗಲು ತೆರಳಿದ್ದ ವೇಳೆ, ಆಕೆಯ ಕುಟುಂಬಸ್ಥರು ಇಬ್ಬರ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಶವಗಳನ್ನು ಗಗನ್ ನದಿಯ ಸಮೀಪ ಹೂತುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಕುಟುಂಬ ಬುಧವಾರ ಎಸ್‌ಎಸ್‌ಪಿ ಸತ್ಪಾಲ್ ಆಂಟಿಲ್ ಅವರನ್ನು ಸಂಪರ್ಕಿಸಿದ ನಂತರ ತನಿಖೆ ಆರಂಭಗೊಂಡಿತು. ವಿಚಾರಣೆ ವೇಳೆ ಯುವತಿಯ ಕುಟುಂಬ ಸದಸ್ಯರು ಶವಗಳನ್ನು ಹೂತುಹಾಕಿದ್ದ ಸ್ಥಳವನ್ನು ಬಹಿರಂಗಪಡಿಸಿದ್ದಾರೆ.

ಹೆಚ್ಚಿನ ತನಿಖೆಯಲ್ಲಿ ಕಾಜಲ್ ಅವರ ಸಹೋದರರಾದ ರಿಂಕು ಸೈನಿ ಮತ್ತು ಸತೀಶ್ ಸೈನಿ ಕೊಲೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಅವರ ಹೇಳಿಕೆ ಆಧಾರದ ಮೇಲೆ ಮೃತದೇಹಗಳನ್ನು ಹೊರತೆಗೆದುಕೊಳ್ಳಲಾಗಿದ್ದು, ಅಪರಾಧಕ್ಕೆ ಬಳಸಿದ ಸಲಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯುವಕನ ಕುಟುಂಬ ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ (ನಗರ) ಕುಮಾರ್ ರಣವಿಜಯ್ ತಿಳಿಸಿದ್ದಾರೆ.

ಮೃತದೇಹಗಳು ಪತ್ತೆಯಾದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪಿಎಸಿ ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಜೋಡಿ ಪರಸ್ಪರ ಸಂಬಂಧದಲ್ಲಿದ್ದು, ಒಟ್ಟಿಗೆ ನಾಪತ್ತೆಯಾಗಿದ್ದರೆಂದು ಗ್ರಾಮ ಪ್ರಧಾನ್ ಪ್ರಣವ್ ಸೈನಿ ತಿಳಿಸಿದ್ದಾರೆ. ಬೆಳಿಗ್ಗೆ ಕಾಣೆಯಾದ ಕುರಿತು ದೂರು ದಾಖಲಾಗಿದ್ದು, ಸಂಜೆ ವೇಳೆಗೆ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News