×
Ad

ಕೆಂಪು ಕೋಟೆ ಮೇಲಿನ ದಾಳಿ ಪ್ರಕರಣ| ಮರಣ ದಂಡನೆ ಪ್ರಶ್ನಿಸಿ ಲಷ್ಕರೆ ಭಯೋತ್ಪಾದಕನಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ

Update: 2026-01-22 20:21 IST

ಮುಹಮ್ಮದ್ ಆರಿಫ್ | Photo Credit  :  indianexpress.com

ಹೊಸದಿಲ್ಲಿ, ಜ. 22: 2000 ಇಸವಿಯಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಪ್ರಕರಣದ ದೋಷಿ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕ ಮುಹಮ್ಮದ್ ಆರಿಫ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ಗುರುವಾರ ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಸರಕಾರಕ್ಕೆ ನೋಟಿಸ್ ನೀಡಿದೆ.

ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಎರಡು ಬಾರಿ ಎತ್ತಿಹಿಡಿದಿತ್ತು.

ದೋಷಿಯ ಪರವಾಗಿ ವಕೀಲ ಪಯೋಶಿ ರಾಯ್ ಮಂಡಿಸಿದ ವಾದವನ್ನು ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವೊಂದು ದಿಲ್ಲಿ ಸರಕಾರಕ್ಕೆ ನೋಟಿಸ್ ನೀಡಿತು.

2000 ಡಿಸೆಂಬರ್ 22ರಂದು, ಲಷ್ಕರೆ ತಯ್ಯಬಕ್ಕೆ ಸೇರಿದವರೆನ್ನಲಾದ ಮೂವರು ಭಯೋತ್ಪಾದಕರು ಕೆಂಪು ಕೋಟೆಯನ್ನು ಪ್ರವೇಶಿಸಿ ಮೂವರು ಸೈನಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

ಈ ಕುರಿತು ತನಿಖೆ ನಡೆಸಿದ ದಿಲ್ಲಿ ಪೊಲೀಸರು, ಘಟನೆ ನಡೆದ ಮರುದಿನ ಕೆಂಪು ಕೋಟೆಯ ಹೊರಗಡೆ ಫೋನ್ ಸಂಖ್ಯೆ ಬರೆಯಲ್ಪಟ್ಟಿದ್ದ ಚೀಟಿಯೊಂದನ್ನು ಪತ್ತೆಹಚ್ಚಿದರು. ಆ ಫೋನ್ ಸಂಖ್ಯೆಯ ಕರೆಗಳ ಆಧಾರದಲ್ಲಿ ಪಾಕಿಸ್ತಾನಿ ರಾಷ್ಟ್ರೀಯ ಆರಿಫ್‌ನನ್ನು ಬಂಧಿಸಿದರು. ಅವನು ಭಾರತವನ್ನು ಅಕ್ರಮವಾಗಿ ಪ್ರವೇಸಿದ್ದನು ಎನ್ನಲಾಗಿದೆ.

ಆರಿಫ್‌ನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ ದಿಲ್ಲಿಯ ನ್ಯಾಯಾಲಯವೊಂದು, 2005 ಅಕ್ಟೋಬರ್ 31ರಂದು ಮರಣ ದಂಡನೆ ವಿಧಿಸಿತ್ತು.

ಈ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ 2007 ಸೆಪ್ಟಂಬರ್‌ನಲ್ಲಿ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಅವನ ಮೊದಲ ಮರುಪರಿಶೀಲನಾ ಅರ್ಜಿಯನ್ನು ಇಬ್ಬರು ನ್ಯಾಯಾಧೀಶರ ನ್ಯಾಯಪೀಠವೊಂದು 2011 ಆಗಸ್ಟ್‌ನಲ್ಲಿ ತಿರಸ್ಕರಿಸಿ ಮರಣ ದಂಡನೆಯನ್ನು ಎತ್ತಿಹಿಡಿದಿತ್ತು.

2022 ನವೆಂಬರ್ 3ರಂದು, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವೊಂದು ಅವನ ಎರಡನೇ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News