ರೈಲುಗಳಿಗೆ ಕಲ್ಲೆಸೆಯುವವರ ವಿರುದ್ಧ ಕಠಿಣ ಕ್ರಮ: ರೈಲ್ವೆ ಇಲಾಖೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo Credit ; PTI
ಹೊಸದಿಲ್ಲಿ, ಜ. 22: ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಎಚ್ಚರಿಸಿದೆ.
ಇದುವರೆಗೆ 1,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. 600 ಮಂದಿಯನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.
ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರೈಲ್ವೆ ಸಚಿವಾಲಯ, ವಿವಿಧ ರೈಲ್ವೆ ವಲಯಗಳಲ್ಲಿ ಕಲ್ಲು ತೂರಾಟದ ಘಟನೆಗಳನ್ನು ಭಾರತೀಯ ರೈಲ್ವೆ ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದೆ.
ಇಂತಹ ಕಾನೂನಬಾಹಿರ ಕೃತ್ಯಗಳು ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದಲ್ಲದೆ, ಅಮೂಲ್ಯವಾದ ಸಾರ್ವಜನಿಕ ಆಸ್ತಿಗೆ ಗಮನಾರ್ಹ ಹಾನಿ ಉಂಟು ಮಾಡುತ್ತದೆ ಎಂದು ಅದು ಗಮನ ಸೆಳೆದಿದೆ.
ಅಧಿಕೃತ ದತ್ತಾಂಶದ ಪ್ರಕಾರ, 2025 ಜುಲೈ ಹಾಗೂ ಡಿಸೆಂಬರ್ ನಡುವೆ ಭಾರತೀಯ ರೈಲ್ವೆ ಜಾಲದಲ್ಲಿ ಕಲ್ಲು ತೂರಾಟದ ಒಟ್ಟು 1,698 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಈ ಘಟನೆಗಳಲ್ಲಿ ಭಾಗಿಯಾದ 665 ಮಂದಿಯನ್ನು ಬಂಧಿಸಲಾಗಿದೆ.
ವಲಯವಾರು ದತ್ತಾಂಶದ ಪ್ರಕಾರ ಉತ್ತರ ರೈಲ್ವೆಯಲ್ಲಿ ಅತಿ ಹೆಚ್ಚು 363 ಪ್ರಕರಣಗಳು ವರದಿಯಾಗಿವೆ. ಪೂರ್ವ ರೈಲೆಯಲ್ಲಿ 219 ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಮಧ್ಯ ರೈಲ್ವೆಯಲ್ಲಿ 140, ಉತ್ತರ ಮಧ್ಯ ರೈಲ್ವೆಯಲ್ಲಿ 126, ಪಶ್ಚಿಮ ರೈಲ್ವೆಯಲ್ಲಿ 116 ಹಾಗೂ ದಕ್ಷಿಣ ರೈಲ್ವೆಯಲ್ಲಿ 108 ಪ್ರಕರಣಗಳು ದಾಖಲಾಗಿವೆ.
ಈ ಘಟನೆಗಳಿಗೆ ಸಂಬಂಧಿಸಿದಂತೆ ಮಾಡಲಾದ ಬಂಧನಗಳು ಸುಸ್ಥಿರ ಕಾನೂನು ಜಾರಿ ಪ್ರಯತ್ನವನ್ನು ಪ್ರತಿಬಿಂಬಿಸಿದೆ. ಅಲ್ಲದೆ ಪ್ರಯಾಣಿಕರು ಸುರಕ್ಷತೆಗೆ ಹಾಗೂ ರೈಲ್ವೆ ಸೊತ್ತುಗಳಿಗೆ ಹಾನಿ ಉಂಟು ಮಾಡುವ ಚಟುವಟಿಕೆಗಳ ಕುರಿತ ಶೂನ್ಯ ಸಹಿಷ್ಣುತೆಯನ್ನು ಪ್ರತಿಬಿಂಬಿಸಿದೆ ಎಂದು ಸಚಿವಾಲಯ ಹೇಳಿದೆ.