×
Ad

ವಿರೋಧದ ಬೆನ್ನಲ್ಲೇ ಫೋನ್‌ಗಳಲ್ಲಿ ʼಸಂಚಾರ್ ಸಾಥಿʼ ಆ್ಯಪ್ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರಕಾರ

ಡೌನ್‌ಲೋಡ್‌ಗಳ ಏರಿಕೆಯೇ ಹಿಂತೆಗೆತಕ್ಕೆ ಕಾರಣ ಎಂದ ಸರ್ಕಾರ!

Update: 2025-12-03 17:57 IST

Photo Credit : sancharsaathi.gov.in

ಹೊಸದಿಲ್ಲಿ: ಡಿಜಿಟಲ್ ಹಕ್ಕುಗಳ ಸಂಘಟನೆಗಳು, ತಂತ್ರಜ್ಞಾನ ತಜ್ಞರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಸಂವಹನ ಸಚಿವಾಲಯವು ಬುಧವಾರ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ʼಸಂಚಾರ್ ಸಾಥಿʼ ಅಪ್ಲಿಕೇಶನ್ ಕಡ್ಡಾಯ ಮಾಡುವ ನಿರ್ಧಾರವನ್ನು ಹಿಂಪಡದಿದೆ.

ಡಿಸೆಂಬರ್ 1ರಂದು ದೂರಸಂಪರ್ಕ ಇಲಾಖೆ (DoT) ಹೊರಡಿಸಿದ್ದ ಆದೇಶದ ಪ್ರಕಾರ, ನಕಲಿ ಮತ್ತು ವಂಚನಾತ್ಮಕ IMEI ಸಂಖ್ಯೆಗಳಿಂದ ಉಂಟಾಗುವ ಟೆಲಿಕಾಂ ಭದ್ರತಾ ಅಪಾಯಗಳನ್ನು ತಡೆಯಲು 2026 ಮಾರ್ಚ್‌ ನಿಂದ ಎಲ್ಲಾ ಫೋನ್ ಗಳಲ್ಲಿ ಸಂಚಾರ್ ಸಾಥಿ ಪ್ರಿ-ಇನ್ಸ್ಟಾಲ್ ಆಗಿರುವುದು ಕಡ್ಡಾಯವಾಗಬೇಕಿತ್ತು. ಆದರೆ ಗೌಪ್ಯತೆ, ಕಣ್ಗಾವಲು ಮತ್ತು ಬಳಕೆದಾರರ ಸ್ವಾತಂತ್ರ್ಯ ಕುರಿತ ಕಳವಳಗಳು ಬಿರುಸುಗೊಳ್ಳುತ್ತಿದ್ದಂತೆಯೇ ಸರ್ಕಾರ ತನ್ನ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ, ಸಂಚಾರ್ ಸಾಥಿಯ ಬಳಕೆ ಹೆಚ್ಚಿರುವುದು ಪ್ರಮುಖ ಕಾರಣವೆಂದು ಉಲ್ಲೇಖಿಸಿದೆ. ಆದೇಶ ಹೊರಬಂದ ದಿನವೇ ಸುಮಾರು 6 ಲಕ್ಷ ಹೊಸ ನೋಂದಣಿಗಳು ಆಗಿದ್ದು, ಬಳಕೆಯಲ್ಲಿ ಹತ್ತು ಪಟ್ಟು ಏರಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ ಪ್ರಾರಂಭವಾದ ಈ ಅಪ್ಲಿಕೇಶನ್‌ಗೆ ಈಗಾಗಲೇ 1.4 ಕೋಟಿ ಬಳಕೆದಾರರಿದ್ದು, ಪ್ರತಿದಿನ ಸರಾಸರಿ 2,000 ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. “ನಾಗರಿಕರೇ ರಿಪೋರ್ಟ್ ಮಾಡುವುದು ಹೆಚ್ಚುತ್ತಿರುವುದರಿಂದ ಕಡ್ಡಾಯ ಮಾಡುವುದು ಅಗತ್ಯವಿಲ್ಲ” ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಆ್ಯಪ್ ಕಡ್ಡಾಯದ ನಿರ್ಧಾರ ಹೊರಬಿದ್ದ ಕ್ಷಣದಿಂದಲೇ ಡಿಜಿಟಲ್ ಹಕ್ಕುಗಳ ಹೋರಾಟಗಾರರು ಮತ್ತು ವಿರೋಧ ಪಕ್ಷಗಳು ಸರ್ಕಾರದ ಮೇಲೆ ತೀವ್ರವಾಗಿ ಟೀಕೆ ಮಾಡಿದ್ದವು. ಅಪ್ಲಿಕೇಶನ್ ಕಣ್ಗಾವಲು ಸಾಧನವಾಗಬಹುದೆಂಬ ಆತಂಕ, ಬಳಕೆದಾರರ ಆಯ್ಕೆಗೆ ಧಕ್ಕೆ ತರುವ ಸಾಧ್ಯತೆ ಹಾಗೂ ಡೇಟಾ ಸುರಕ್ಷತೆ ಕುರಿತ ಪ್ರಶ್ನೆಗಳು ವ್ಯಾಪಕವಾಗಿ ಹುಟ್ಟಿಕೊಂಡವು.

ಆದರೆ, ಸರ್ಕಾರವು ತನ್ನ ಪ್ರತಿಕ್ರಿಯೆಯಲ್ಲಿ ಅಪ್ಲಿಕೇಶನ್‌ನ ರಚನೆ “ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವುದಕ್ಕಾಗಿ ಮಾತ್ರ” ಎಂಬುದಾಗಿ ಸ್ಪಷ್ಟಪಡಿಸಿದೆ. ಬಳಕೆದಾರರು ಬಯಸಿದರೆ ಯಾವುದೇ ವೇಳೆಯಲ್ಲಿ ಅಪ್ಲಿಕೇಶನ್ ಅನ್‌ಇನ್ಸ್ಟಾಲ್ ಮಾಡಬಹುದೆಂದು ಅಧಿಕಾರಿಗಳು ಒತ್ತಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News