ಕೇಂದ್ರದ ಮಧ್ಯಾಹ್ನದೂಟ ಯೋಜನೆಯಡಿ ಶಾಲೆಗಳ ಸಂಖ್ಯೆಯಲ್ಲಿ ಐದು ವರ್ಷಗಳಲ್ಲಿ 84,400ರಷ್ಟು ಕುಸಿತ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ 2020-21ರಲ್ಲಿ 11.1 ಲಕ್ಷದಷ್ಟಿದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.3 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ. ಅಂದರೆ ಐದು ವರ್ಷಗಳಲ್ಲಿ 84,453 ಶಾಲೆಗಳು ಯೋಜನೆಯ ವ್ಯಾಪ್ತಿಯಿಂದ ಹೊರಬಿದ್ದಿವೆ.
ಕೇಂದ್ರದಿಂದ ಪ್ರಾಯೋಜಿತ ಈ ಯೋಜನೆಯು ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಬುಧವಾರ ಸಂಸತ್ತಿನಲ್ಲಿ ಆಪ್ ಸಂಸದ ಸಂಜಯ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಖಾತೆಯ ರಾಜ್ಯ ಸಚಿವ ಜಯಂತ್ ಚೌಧರಿಯವರು,2020-21 ಮತ್ತು 2021-22ರ ನಡುವೆ ಶಾಲೆಗಳ ಸಂಖ್ಯೆಯಲ್ಲಿ ಅತ್ಯಂತ ತೀವ್ರ ಇಳಿಕೆಯಾಗಿದ್ದು,11.1 ಲಕ್ಷದಷ್ಟಿದ್ದ ಶಾಲೆಗಳ ಸಂಖ್ಯೆ 35,574ರಷ್ಟು ಕಡಿಮೆಯಾಗಿ 10.8 ಲಕ್ಷಕ್ಕೆ ಕುಸಿದಿತ್ತು. 2022-23ರಲ್ಲಿ ಶಾಲೆಗಳ ಸಂಖ್ಯೆ 10.7ಲಕ್ಷಕ್ಕೆ ಮತ್ತು 2023-24ರಲ್ಲಿ 10.6 ಲಕ್ಷಕ್ಕೆ ಇಳಿಕೆಯಾಗಿತ್ತು. 2024-25ರಲ್ಲಿ ಅದು ಇನ್ನಷ್ಟು ಇಳಿಕೆಯಾಗಿ 10.3 ಲಕ್ಷವನ್ನು ತಲುಪಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶವು ಅತ್ಯಂತ ಹೆಚ್ಚಿನ ಕುಸಿತವನ್ನು ದಾಖಲಿಸಿದ್ದು, ಅಲ್ಲಿ ಐದು ವರ್ಷಗಳಲ್ಲಿ 25,361 ಶಾಲೆಗಳು ಯೋಜನೆಯ ವ್ಯಾಪ್ತಿಯಿಂದ ಹೊರಬಿದ್ದಿವೆ. ನಂತರ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ ಇದೇ ಅವಧಿಯಲ್ಲಿ ಯೋಜನೆಯಡಿ ಶಾಲೆಗಳ ಸಂಖ್ಯೆ 9,321ರಷ್ಟು ಇಳಿಕೆಯಾಗಿದೆ.
ಯೋಜನೆಯಡಿ ಮಕ್ಕಳಿಗೆ ಮಧ್ಯಾಹ್ನದೂಟವನ್ನು ಒದಗಿಸುವ ‘ಒಟ್ಟಾರೆ ಹೊಣೆಗಾರಿಕೆ’ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳದ್ದಾಗಿದೆ. ಯೋಜನೆಯಡಿ ವರ್ಷದಲ್ಲಿ ಸರಾಸರಿ 220 ದಿನಗಳ ಕಾಲ ಮಕ್ಕಳಿಗೆ ಆಹಾರವನ್ನು ಒದಗಿಸಲಾಗುತ್ತದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 11 ಕೋಟಿ ವಿದ್ಯಾರ್ಥಿಗಳ ದಾಖಲಾತಿ ಪೈಕಿ ಸರಾಸರಿ 8.5 ಕೋಟಿ ವಿದ್ಯಾರ್ಥಿಗಳು 10.35 ಲಕ್ಷಕ್ಕೂ ಅಧಿಕ ಶಾಲೆಗಳಲ್ಲಿ ಪ್ರತಿದಿನ ಮಧ್ಯಾಹ್ನದೂಟದ ಸೌಲಭ್ಯ ಪಡೆಯುತ್ತಿದ್ದಾರೆ ಎಂದೂ ಚೌಧರಿ ತಿಳಿಸಿದರು.
ಸುದ್ದಿಸಂಸ್ಥೆಯ ವರದಿಯಂತೆ,ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಕೆಜಿ ಮತ್ತು 1ರಿಂದ 5ನೇ ತರಗತಿವರೆಗೆ ಯೋಜನೆಯಡಿ ಆಹಾರ ಸಾಮಗ್ರಿಗಳ ವೆಚ್ಚವನ್ನು ದಿನಕ್ಕೆ 6.1 ರೂ.ಗಳಿಂದ 6.7 ರೂ.ಗೆ ಹಾಗೂ 6ರಿಂದ 8ನೇ ತರಗತಿವರೆಗೆ 9.20 ರೂ.ಗಳಿಂದ 10.10 ರೂ.ಗೆ ಹೆಚ್ಚಿಸಿತ್ತು.
2024-25ರಲ್ಲಿ ಕೇಂದ್ರ ಸರಕಾರವು ಯೋಜನೆಗಾಗಿ 12,467.3 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದು, ಬಳಿಕ ಅದನ್ನು 10,000 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿತ್ತು.ಆದಾಗ್ಯೂ ಫೆಬ್ರವರಿ 2025ರ ವೇಳೆಗೆ ಕೇವಲ 5,421.9 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 2025-26ನೇ ಸಾಲಿಗೆ ಕೇಂದ್ರ ಬಜೆಟ್‌ನಲ್ಲಿ ಯೋಜನೆಗಾಗಿ 12,500 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.