ಟೈರ್ ಸ್ಫೋಟ: ಕೊಚ್ಚಿಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಅನಾಹುತ
Photo Credit : PTI
ಕೊಚ್ಚಿ: ಕೋಯಿಕ್ಕೋಡ್ ನಿಂದ ಸೌದಿ ಅರೇಬಿಯಾದ ಜಿದ್ದಾದಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಟೈರ್ ಗಳು ಸ್ಫೋಟಗೊಂಡ ಪರಿಣಾಮ, ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಖ್ಯೆ ಐಎಕ್ಸ್ 398ನಲ್ಲಿ ಬಲಭಾಗದ ಮುಖ್ಯ ಲ್ಯಾಂಡಿಂಗ್ ಗೇರ್ ನಲ್ಲಿ ಸಮಸ್ಯೆ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನದ ಮಾರ್ಗವನ್ನು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ, ಬೆಳಗ್ಗೆ 9.07 ಗಂಟೆಗೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
“ಮುಂಚಿತವಾಗಿಯೇ ಎಲ್ಲ ತುರ್ತು ಸೇವೆಗಳನ್ನು ಸಕ್ರಿಯಗೊಳಿಸಲಾಗಿತ್ತು ಹಾಗೂ ವಿಮಾನದ ಸಿಬ್ಬಂದಿಗಳಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ಗಾಯಗಳಾಗಿಲ್ಲ. ವಿಮಾನ ಭೂಸ್ಪರ್ಶ ಮಾಡಿದ ಬಳಿಕ ನಡೆಸಿದ ತಪಾಸಣೆಯಲ್ಲಿ ಎರಡೂ ಬಲ ಭಾಗದ ಟೈರ್ ಗಳು ಸ್ಫೋಟಗೊಂಡಿರುವುದು ದೃಢಪಟ್ಟಿದೆ” ಎಂದೂ ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಇದರ ಬೆನ್ನಿಗೇ, ರನ್ ವೇಯನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗಿದ್ದು, ಸಹಜ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.