×
Ad

ಅಮೆರಿಕದ ಸುಂಕದಿಂದ ತಮಿಳುನಾಡಿನ ಜವಳಿ, ಚರ್ಮೋದ್ಯಮದ ಮೇಲೆ ತೀವ್ರ ಪರಿಣಾಮ: ಪ್ರಧಾನಿಗೆ ಪತ್ರ ಬರೆದ ಸಿಎಂ ಸ್ಟಾಲಿನ್

Update: 2025-12-18 12:34 IST

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Photo: PTI)

ಚೆನ್ನೈ: ಭಾರತದ ರಫ್ತಿನ ಮೇಲೆ ಅಮೆರಿಕ ಶೇ.50ರಷ್ಟು ಸುಂಕ ವಿಧಿಸಿರುವುದರಿಂದ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಅಮೆರಿಕದ ಸುಂಕಗಳು ತಮಿಳುನಾಡಿನ ಜವಳಿ, ಉಡುಪು ಮತ್ತು ಚರ್ಮೋದ್ಯಮವನ್ನು ಕುಂಠಿತಗೊಳಿಸಿದ್ದು, ಇದರ ಪರಿಣಾಮವಾಗಿ 15,000 ಕೋಟಿ ರೂ.ಗಳಷ್ಟು ಆರ್ಡರ್‌ಗಳ ನಷ್ಟವಾಗಿದೆ. ಲಕ್ಷಾಂತರ ಉದ್ಯೋಗಗಳು, ವಿಶೇಷವಾಗಿ ಮಹಿಳೆಯರ ಉದ್ಯೋಗಗಳು ಗಂಭೀರ ಅಪಾಯದಲ್ಲಿವೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ಭಾರತದ ನಿಟ್ವೇರ್ ರಾಜಧಾನಿ ತಿರುಪ್ಪೂರಿನಲ್ಲಿ ರಫ್ತುದಾರರು 15,000 ಕೋಟಿ ರೂಪಾಯಿಗಳ ಅಪಾರ ಆರ್ಡರ್‌ಗಳ ನಷ್ಟವನ್ನು ವರದಿ ಮಾಡಿದ್ದಾರೆ. ವಿವಿಧ ಘಟಕಗಳಲ್ಲಿ 30% ವರೆಗಿನ ಬಲವಂತದ ಉತ್ಪಾದನಾ ಕಡಿತವೂ ಸೇರಿದೆ. ಹೊಸ ಆರ್ಡರ್‌ಗಳು ಕೂಡ ಆತಂಕಕಾರಿ ದರದಲ್ಲಿ ಕಡಿಮೆಯಾಗುತ್ತಿವೆ.

"ಇದು ತಿರುಪ್ಪೂರು, ಕೊಯಮತ್ತೂರು, ಈರೋಡ್ ಮತ್ತು ಕರೂರ್ ಜಿಲ್ಲೆಗಳ ರಫ್ತುದಾರರಿಗೆ ಒಟ್ಟಾರೆಯಾಗಿ ದಿನಕ್ಕೆ 60 ಕೋಟಿ ರೂ.ಗಳ ಆದಾಯ ನಷ್ಟಕ್ಕೆ ಕಾರಣವಾಗಿದೆ. ಇದು ಅನೇಕ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಕುಸಿತದ ಅಂಚಿಗೆ ತಳ್ಳಿದೆ. ವೆಲ್ಲೂರು, ರಾಣಿಪೇಟೆ ಮತ್ತು ತಿರುಪತ್ತೂರು ಜಿಲ್ಲೆಗಳಲ್ಲಿರುವ ಪಾದರಕ್ಷೆಗಳ ಘಟಕಗಳಲ್ಲಿಯೂ ಇದೇ ರೀತಿಯ ನಿರಾಶಾದಾಯಕ ಸನ್ನಿವೇಶ ಕಂಡುಬಂದಿದೆ.

ಸಾಧ್ಯವಾದಷ್ಟು ಬೇಗ ದ್ವಿಪಕ್ಷೀಯ ಒಪ್ಪಂದದ ಮೂಲಕ ಈ ಸುಂಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಆದ್ಯತೆ ನೀಡಬೇಕು. ತ್ವರಿತ ನಿರ್ಧಾರ ನಮ್ಮ ರಫ್ತುದಾರರ ಭವಿಷ್ಯವನ್ನು ಪುನರುಜ್ಜೀವನಗೊಳಿಸುವುದಲ್ಲದೆ, ವಿಶ್ವಾಸಾರ್ಹ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ಈ ಬಿಕ್ಕಟ್ಟನ್ನು ಪರಿಹಾರಗೊಳಿಸುವುದನ್ನು ನಾನು ಎದುರು ನೋಡುತ್ತಿದ್ದೇವೆ ಎಂದು ಸ್ಟಾಲಿನ್‌ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News