×
Ad

Uttar Pradesh | ಅಪ್ರಾಪ್ತ ಬಾಲಕರಿಂದ ಬಾಲಕಿಗೆ ಕಿರುಕುಳ; ಸಂಸ್ಕಾರ ಕಲಿಸಿಲ್ಲ ಎಂದು ನಾಲ್ವರು ತಾಯಂದಿರ ಬಂಧನ!

Update: 2025-12-21 08:11 IST

ಸಾಂದರ್ಭಿಕ ಚಿತ್ರ | Photo Credit : freepik

ಬರೇಲಿ, (ಉತ್ತರಪ್ರದೇಶ): ಎಂಟನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳಿಗೆ 13 ವರ್ಷಕ್ಕಿಂತ ಕೆಳ ವಯಸ್ಸಿನ ಬಾಲಕರು ಕಿರುಕುಳ ನೀಡಿದ ಆರೋಪದಲ್ಲಿ ಆ ಬಾಲಕರ ತಾಯಂದಿರನ್ನು ಬಂಧಿಸಿದ ಸ್ವಾರಸ್ಯಕರ ಪ್ರಕರಣ ಬೆಳಕಿಗೆ ಬಂದಿದೆ.

ಭಾರತೀಯ ದಂಡಸಂಹಿತೆಯ ನಿರ್ಬಂಧಾತ್ಮಕ ಸೆಕ್ಷನ್‍ಗಳ ಅಡಿಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಲಿಲ್ಲ ಎಂಬ ಆರೋಪದಲ್ಲಿ ತಾಯಂದಿರನ್ನು ಬಂಧಿಸಲಾಗಿದೆ.

ಮಹಿಳೆಯರನ್ನು ಶುಕ್ರವಾರ ಬಂಧಿಸಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರುಪಡಿಸಲಾಗಿದ್ದು, ವೈಯಕ್ತಿಕ ಬಾಂಡ್ ಬಳಿಕ ಬಿಡುಗಡೆ ಮಾಡಲಾಯಿತು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದೇ ಇರುವ ತಾಯಂದಿರನ್ನು ಹೊಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಾಲೆಗೆ ಹೋಗುವಾಗ ದಾರಿಮಧ್ಯದಲ್ಲಿ ಈ ಬಾಲಕರು ಹಲವು ದಿನಗಳಿಂದ ತನ್ನ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಾಲಕಿ, ತಂದೆಯ ಬಳಿ ಹೇಳಿಕೊಂಡಿದ್ದಳು. ಬಾಲಕಿಯ ಕುಟುಂಬದವರು ಉಷಾಯಿತ್ ಪೊಲೀಸ್ ಠಾಣೆಯನ್ನು ಬುಧವಾರ ಸಂಪರ್ಕಿಸಿ ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯ್ದೆಯಡಿ FIR ದಾಖಲಿಸಿದ್ದರು.

ಕೀಟಲೆ ಮಾಡಿದ್ದಾರೆ ಎನ್ನಲಾದ ಬಾಲಕರು ಅದೇ ಗ್ರಾಮದವರು ಎಂದು ಠಾಣಾಧಿಕಾರಿ ಅಜಯ್‍ಪಾಲ್ ಸಿಂಗ್ ಹೇಳಿದ್ದಾರೆ. "ಈ ಬಾಲಾಪರಾಧಿಗಳು ಶಾಲೆಗೆ ಹೋಗದೇ ಅದೇ ಪ್ರದೇಶದಲ್ಲಿ ಅಡ್ಡಾಡುತ್ತಿದ್ದರು. ಬಾಲಕಿ ಹಾಗೂ ಬಾಲಕರಿಗೆ ಪರಿಚಯ ಇರಲಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಬಾಲಕಿಗೆ ಕಿರುಕುಳ ನೀಡಲಾಗಿದ್ದು, ಬಾಲಕರು ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಪೋಷಕರಿಗೆ ನೋಟಿಸ್ ನೀಡಲಾಗಿತ್ತು. ಅವರ ತಾಯಂದಿರನ್ನು ವಶಕ್ಕೆ ಪಡೆಯುವ ಮೂಲಕ, ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು ಎಂಬ ಸಂದೇಶವನ್ನು ಮಹಿಳೆಯರಿಗೆ ಈ ಪ್ರಕರಣ ನೀಡಿದೆ" ಎಂದು ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತದ ಪೋಷಕರನ್ನು ಶಿಕ್ಷಿಸುವ ವಿಧಾನ ಇದಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮಹಿಳೆಯರನ್ನು ನಿರ್ಬಂಧಾತ್ಮಕ ಕಾರಣಕ್ಕೆ ಬಂಧಿಸಿರುವ ಬಗ್ಗೆ ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News