ಅಪಹರಣ ಪ್ರಕರಣ | ಹೈಕೋರ್ಟ್ ನಿರ್ದೇಶನದ ಬಳಿಕ ಎಡಿಜಿಪಿ ಅಮಾನತು ಕ್ರಮಕ್ಕೆ ತಮಿಳುನಾಡು ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಎಚ್.ಎಂ.ಜಯರಾಮ |PC : indianexpress.com
ಹೊಸದಿಲ್ಲಿ: ಹದಿಹರೆಯದ ಯುವಕನೋರ್ವನ ಅಪಹರಣ ಪ್ರಕರಣವೊಂದಲ್ಲಿ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ (ಎಡಿಜಿಪಿ) ಎಚ್.ಎಂ.ಜಯರಾಮ ಅವರನ್ನು ಅಮಾನತುಗೊಳಿಸಿದ್ದಕ್ಕಾಗಿ ಬುಧವಾರ ತಮಿಳುನಾಡು ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಇಂತಹ ಕ್ರಮವು ಆಘಾತಕಾರಿಯಾಗಿದೆ ಮತ್ತು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಹೇಳಿತು. ಇದಕ್ಕೂ ಮುನ್ನ ಜಯರಾಮ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಪೋಲಿಸರಿಗೆ ಮೌಖಿಕ ಆದೇಶವನ್ನು ನೀಡಿತ್ತು.
ಇಂತಹ ಕ್ರಮದ ಅಗತ್ಯವೇನಿತ್ತು ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ ಅವರ ಪೀಠವು ರಾಜ್ಯ ಸರಕಾರವನ್ನು ಪ್ರಶ್ನಿಸಿತು.
ಜಯರಾಮ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಮಂಗಳವಾರ ಸಂಜೆ ಬಿಡುಗಡೆಗೊಳಿಸಲಾಗಿದೆ ಎಂದು ರಾಜ್ಯ ಸರಕಾರದ ಪರ ವಕೀಲರು ತಿಳಿಸಿದರು.
ತನ್ನ ಕಕ್ಷಿದಾರರನ್ನು ಪೋಲಿಸರು ಬಿಡುಗಡೆಗೊಳಿಸಿದ್ದಾರೆ. ಆದರೆ ಸರಕಾರವು ಅವರನ್ನು ಅಮಾನತುಗೊಳಿಸಿದೆ ಎಂದು ಜಯರಾಮ ಪರ ವಕೀಲರು ಹೇಳಿದರು.
ಅವರು ಹಿರಿಯ ಪೋಲಿಸ್ ಅಧಿಕಾರಿಯಾಗಿದ್ದಾರೆ. ಅವರನ್ನು ಅಮಾನತುಗೊಳಿಸುವ ಅಗತ್ಯವೇನಿತ್ತು? ಇಂತಹ ಆದೇಶಗಳು ಆಘಾತಕಾರಿಯಾಗಿವೆ ಮತ್ತು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸುತ್ತವೆ ಎಂದು ಹೇಳಿದ ಪೀಠವು, ಸರಕಾರದಿಂದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಮತ್ತು ಅಮಾನತನ್ನು ಹಿಂದಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ತನಗೆ ಗುರುವಾರ ಒದಗಿಸುವಂತೆ ರಾಜ್ಯ ಸರಕಾರದ ಪರ ವಕೀಲರಿಗೆ ಸೂಚಿಸತು.
ತನ್ನನ್ನು ಬಂಧಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಯರಾಮ ಜೂ.16ರಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಅವರ ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿತ್ತು. ಮದ್ರಾಸ್ ಉಚ್ಚ ನ್ಯಾಯಾಲಯದ ಬಂಧನ ಆದೇಶವು ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿತ್ತು ಎಂದು ಜಯರಾಮ ಪರ ವಕೀಲರು ವಾದಿಸಿದ್ದರು.
ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯನ್ನು ಎದುರಿಸುತ್ತಿರುವ ಎಐಎಡಿಎಂಕೆ ಮಿತ್ರಪಕ್ಷ ಪುಥಿಯ ಭಾರತಂ ಕಚ್ಚಿ ಪಕ್ಷದ ಸ್ಥಾಪಕ ಹಾಗೂ ಶಾಸಕ ಜಗನ್ ಮೂರ್ತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿತ್ತು. ಪೋಲಿಸರಿಂದೇಕೆ ದೂರ ಓಡುತ್ತಿದ್ದೀರಿ ಎಂದು ಮೂರ್ತಿಯವರನ್ನು ಪ್ರಶ್ನಿಸಿದ್ದ ಹೈಕೋರ್ಟ್ ತನಿಖೆಗೆ
ಹಾಜರಾಗುವಂತೆ ನಿರ್ದೇಶನ ನೀಡಿತ್ತು.
ಅಪಹರಣ ಪ್ರಕರಣದಲ್ಲಿ ಜಯರಾಮ ಅವರ ಅಧಿಕೃತ ಕಾರು ಬಳಕೆಯಾಗಿದ್ದು,ಅವರನ್ನು ಮತ್ತು ಮೂರ್ತಿಯವರನ್ನು ತನ್ನ ಮುಂದೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿತ್ತು.
ಇಬ್ಬರು ಆರೋಪಿಗಳು ಎಡಿಜಿಪಿ ವಿರುದ್ಧ ತಪ್ಪೊಪಿಗೆ ಹೇಳಿಕೆಗಳನ್ನು ನೀಡಿರುವದರಿಂದ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿತ್ತು.