ಪೊಲೀಸರು ಸಮವಸ್ತ್ರ ಧರಿಸಿದ್ದಾಗ ವೈಯಕ್ತಿಕ ಮತ್ತು ಧಾರ್ಮಿಕ ಪಕ್ಷಪಾತವನ್ನು ಬದಿಗಿರಿಸಬೇಕು: ಸುಪ್ರೀಂ ಕೋರ್ಟ್ ತಾಕೀತು
ಸುಪ್ರೀಂ ಕೋರ್ಟ್ |PC : PTI
ಹೊಸದಿಲ್ಲಿ: ಪೊಲೀಸರು ಸಮವಸ್ತ್ರ ಧರಿಸಿದ್ದಾಗ ವೈಯಕ್ತಿಕ ಮತ್ತು ಧಾರ್ಮಿಕ ಪಕ್ಷಪಾತವನ್ನು ಬದಿಗಿರಿಸಬೇಕು ಎಂದು ಗುರುವಾರ ಒತ್ತಿ ಹೇಳಿದ ಸುಪ್ರೀಂ ಕೋರ್ಟ್, 2023ರಲ್ಲಿ ಮಹಾರಾಷ್ಟ್ರದ ಅಕೋಲದಲ್ಲಿ ಸ್ಫೋಟಗೊಂಡಿದ್ದ ಕೋಮು ಗಲಭೆಯಲ್ಲಿ ನಡೆದಿದ್ದ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಕರ್ತವ್ಯ ವಿಮುಖತೆ ಪ್ರದರ್ಶಿಸಿದ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳದ ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಸಂಜಯ್ ಕುಮಾರ್ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠ, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಮಹಾರಾಷ್ಟ್ರದ ಗೃಹ ಇಲಾಖೆಗೆ ನಿರ್ದೇಶನ ನೀಡಿತು.
“ಪೊಲೀಸ್ ಪಡೆಯ ಸಿಬ್ಬಂದಿಗಳು ಸಮವಸ್ತ್ರದಲ್ಲಿದ್ದಾಗ, ಅವರು ಧಾರ್ಮಿಕ, ಜನಾಂಗೀಯ, ಜಾತೀಯ ಅಥವಾ ಇನ್ನಾವುದೇ ಬಗೆಯ ವೈಯಕ್ತಿಕ ಹಾಗೂ ಪೂರ್ವಗ್ರಹಪೀಡಿತ ಪಕ್ಷಪಾತವನ್ನು ಬದಿಗಿರಿಸಬೇಕು ಎಂದು ಹೇಳುವುದು ಅನಗತ್ಯ. ಅವರು ತಮ್ಮ ಹುದ್ದೆ ಹಾಗೂ ಸಮವಸ್ತ್ರಕ್ಕೆ ಸಂಬಂಧಿಸಿದ ಕರ್ತವ್ಯಕ್ಕೆ ಪರಿಪೂರ್ಣ ಮತ್ತು ಸಂಪೂರ್ಣ ಬದ್ಧತೆಯೊಂದಿಗೆ ನಿಷ್ಠರಾಗಿರಬೇಕು. ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಹಾಗಾಗಿಲ್ಲ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮುಹಮ್ಮದ್ ಬಗೆಗಿನ ಧಾರ್ಮಿಕ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಮೇ 2023ರಲ್ಲಿ ಅಕೋಲಾದ ಹಳೆಯ ನಗರ ಪ್ರದೇಶದಲ್ಲಿ ಗಲಭೆ ಸ್ಫೋಟಗೊಂಡಿತ್ತು.