×
Ad

ಎಸ್‌ಐಆರ್ ಪ್ರಶ್ನಿಸಿ ಅರ್ಜಿ: ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ʼಸುಪ್ರೀಂʼ ನಿರ್ದೇಶನ

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಂದ ಅರ್ಜಿ

Update: 2025-11-26 20:55 IST

Photo Credit : PTI 

ಹೊಸದಿಲ್ಲಿ, ನ. 26: ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಡಿ.1ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ಪರಿಷ್ಕರಣೆ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತಿದೆ ಹಾಗೂ ರಾಜಕೀಯ ನಾಯಕರು ಅನಗತ್ಯವಾಗಿ ಭಯವನ್ನು ಸೃಷ್ಟಿಸುತ್ತಿದ್ದಾರೆ ಎಂಬುದಾಗಿ ಚುನಾವಣಾ ಆಯೋಗ ವಾದಿಸುತ್ತಿದ್ದಂತೆಯೇ ಸರ್ವೋಚ್ಛ ನ್ಯಾಯಾಲಯವು ಈ ನಿರ್ದೇಶನವನ್ನು ನೀಡಿತು.

ವಾಸ್ತವಿಕ ಪರಿಸ್ಥಿತಿಯು, ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ವಿವರಿಸಿರುವುದಕ್ಕಿಂತ ಭಿನ್ನವಾಗಿದೆ ಎಂದು ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಹೇಳಿದರು. ಕೇರಳದಲ್ಲಿ 99 ಶೇಕಡ ಗಣತಿ ಅರ್ಜಿಗಳನ್ನು ಈಗಾಗಲೇ ವಿತರಿಸಲಾಗಿದೆ ಹಾಗೂ ಹೆಚ್ಚಿನ ಕೆಲಸ ಮುಗಿದಿದೆ ಎಂದು ಅವರು ನುಡಿದರು.

‘‘ಚುನಾವಣಾ ಆಯೋಗವು ಕೇರಳ ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮನ್ವಯ ಸಾಧಿಸಿ ಸಮಾಲೋಚನೆ ನಡೆಸುತ್ತಿದೆ. ಮತದಾರರ ಗಣತಿಯು ಡಿ.4ರೊಳಗೆ ಮುಕ್ತಾಯಗೊಳ್ಳುತ್ತದೆ ಎಂದು ಕೇರಳ ರಾಜ್ಯ ಚುನಾವಣಾ ಆಯೋಗ ಭರವಸೆ ನೀಡಿದೆ. ಈ ವಿಷಯವನ್ನು ಆ ಬಳಿಕ ವಿಚಾರಣೆಗೆ ಎತ್ತಿಕೊಳ್ಳಬಹುದಾಗಿದೆ’’ ಎಂಬುದಾಗಿಯೂ ಅವರು ಹೇಳಿದರು.

ತಳಮಟ್ಟದಲ್ಲಿ ಪರಿಸ್ಥಿತಿ ತುಂಬಾ ಭಿನ್ನವಾಗಿದೆ ಎಂಬುದಾಗಿ ಅರ್ಜಿದಾರರು ನ್ಯಾಯಾಲಯಕ್ಕೆ ಹೇಳಿದರು. ‘‘ಗಣತಿ ನಡೆಸುತ್ತಿರುವ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಹಲವಾರು ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ಅವರು ತಿಳಿಸಿದರು.

ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ನಾವು ಕೇರಳ ರಾಜ್ಯ ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡುತ್ತೇವೆ ಎಂದು ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಹೇಳಿತು.

ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ದ್ರಾವಿಡ ಮುನ್ನೇತ್ರ ಕಳಗಂ, ಕೇರಳ ಕಾಂಗ್ರೆಸ್, ಸಿಪಿಎಮ್ ಮತ್ತು ತೃಣಮೂಲ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಎಸ್‌ಐಆರ್ ಮುಂದೂಡುವಂತೆ ಕೋರಿ ಕೇರಳ ಸರಕಾರವೂ ಅರ್ಜಿ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News