ಭ್ರಷ್ಟಾಚಾರ ಆರೋಪ: ತನಿಖಾ ಸಮಿತಿ ರಚನೆಗೆ ನ್ಯಾ. ಯಶವಂತ ವರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ
ಯಶವಂತ ವರ್ಮಾ | Photo Credit : PTI
ಹೊಸದಿಲ್ಲಿ: ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ಮಾಡಲು ಲೋಕಸಭಾ ಸ್ಪೀಕರ್ ತನಿಖಾ ಸಮಿತಿಯೊಂದನ್ನು ರಚಿಸಿರುವುದನ್ನು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದ್ದಾರೆ.
ವಾಗ್ದಂಡನೆ ನಿರ್ಣಯಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಒಂದೇ ದಿನ ಏಕಕಾಲದಲ್ಲಿ ಮಂಡಿಸಿದರೆ, ತನಿಖಾ ಸಮಿತಿಯನ್ನು ಉಭಯ ಸದನಗಳು ಜಂಟಿಯಾಗಿ ರಚಿಸಬೇಕು ಎಂಬುದಾಗಿ 1968ರ ನ್ಯಾಯಾಧೀಶರ (ತನಿಖಾ) ಕಾಯ್ದೆಯ ವಿಧಿಗಳನ್ನು ಉಲ್ಲೇಖಿಸುತ್ತಾ ನ್ಯಾ. ವರ್ಮಾ ಹೇಳಿದರು.
ನ್ಯಾ. ವರ್ಮಾ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್‌ಚಂದ್ರ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
ಈ ಪ್ರಕರಣದಲ್ಲಿ, ನಿರ್ಣಯವು ರಾಜ್ಯಸಭೆಯಲ್ಲಿ ರದ್ದಾಯಿತು ಹಾಗೂ ಲೋಕಸಭಾ ಸ್ಪೀಕರ್ ತನಿಖಾ ಸಮಿತಿಯನ್ನು ರಚಿಸಿದರು. ಇದು ಕಾನೂನಿನಲ್ಲಿ ಇಲ್ಲ ಎಂದು ಹಿರಿಯ ವಕೀಲರು ವಾದಿಸಿದರು.
ನಿರ್ಣಯವನ್ನು ತಿರಸ್ಕರಿಸುವ ರಾಜ್ಯಸಭಾ ಉಪಸಭಾಪತಿಯ ನಿರ್ಧಾರವನ್ನೂ ರೋಹಟ್ಗಿ ವಿರೋಧಿಸಿದರು. ಮೊದಲು, ನಿರ್ಣಯವನ್ನು ರಾಜ್ಯಸಭಾ ಸಭಾಪತಿಯವರು ಚರ್ಚೆಗೆ ಅಂಗೀಕರಿಸಿದ್ದರು.
ವಾಗ್ದಂಡನೆ ನಿರ್ಣಯವನ್ನು ವಜಾಗೊಳಿಸುವ ನಿರ್ಣಯಗಳನ್ನು ಸಂಸತ್‌ನ ಎರಡೂ ಸದನಗಳಲ್ಲಿ ಒಂದೇ ದಿನ ಮಂಡಿಸಲಾಯಿತು. ಆದರೆ ರಾಜ್ಯಸಭೆಯಲ್ಲಿ ಮಾತ್ರ ಅದು ಅಂಗೀಕಾರವಾಯಿತು. ಹೀಗಿರುವಾಗ, ಲೋಕಸಭೆಯ ಸ್ಪೀಕರ್ ಏಕಪಕ್ಷೀಯವಾಗಿ ತನಿಖಾ ಸಮಿತಿಯೊಂದನ್ನು ರಚಿಸಬಹುದೇ ಎನ್ನುವುದು ಇಲ್ಲಿನ ಪ್ರಶ್ನೆಯಾಗಿದೆ ಎಂದು ರೋಹಟ್ಗಿ ಹೇಳಿದರು.