×
Ad

ಉತ್ತರ ಪ್ರದೇಶ|ನಿವೃತ್ತ ಸೈನಿಕನ ಮೇಲೆ ಬಿಜೆಪಿ ನಾಯಕರಿಂದ ಹಲ್ಲೆ ಆರೋಪ: ವೈರಲ್ ವೀಡಿಯೊಗೆ ತೀವ್ರ ಆಕ್ರೋಶ

Update: 2026-01-08 19:42 IST

Image Credit: Reddit

ಲಕ್ನೋ, ಜ. 8: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿವೃತ್ತ ಸೈನಿಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ಶಕ್ತಿಯ ದುರುಪಯೋಗ ಹಾಗೂ ನಿವೃತ್ತ ಯೋಧರಿಗೆ ನೀಡಬೇಕಾದ ಗೌರವದ ಕುರಿತು ಈ ಘಟನೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ ಎಂದು newsable.asianetnews.com ವರದಿ ಮಾಡಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಬಿಜೆಪಿ ನಾಯಕರೆಂದು ಗುರುತಿಸಲಾದ ಚೇತನ್ ಬಿಶ್ತ್ ಹಾಗೂ ಪಕ್ಷದ ಮಾಜಿ ಮಂಡಲ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ಲಕ್ನೋ ನಗರದ ಕುರ್ಸಿ ರಸ್ತೆ ಪ್ರದೇಶದಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿದೆ. ಸ್ಥಳೀಯರ ಪ್ರಕಾರ, ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಪುರಾನ್ ಸಿಂಗ್ ಅಧಿಕಾರಿ ಎಂದು ಗುರುತಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ಇಬ್ಬರು ಆರೋಪಿಗಳು ನಿವೃತ್ತ ಯೋಧನನ್ನು ನೆಲಕ್ಕೆ ತಳ್ಳಿ ಪದೇಪದೇ ಹೊಡೆದಿದ್ದಾರೆ. ಘಟನೆ ನಡೆದ ವೇಳೆ ಸುತ್ತಮುತ್ತಲಿದ್ದ ನಿವಾಸಿಗಳು ಆಘಾತಗೊಂಡಿದ್ದು, ಹಲ್ಲೆ ತೀವ್ರ ಆಕ್ರೋಶವನ್ನು ಉಂಟುಮಾಡಿದೆ.

ಒಮ್ಮೆ ದೇಶದ ಗಡಿಗಳನ್ನು ರಕ್ಷಿಸಿದ ನಿವೃತ್ತ ಸೈನಿಕನ ಮೇಲೆ ಈ ರೀತಿಯ ವರ್ತನೆ ನಡೆದಿರುವುದು “ಸಮವಸ್ತ್ರಕ್ಕೆ ಸಲ್ಲಬೇಕಾದ ಗೌರವಕ್ಕೆ ಧಕ್ಕೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರೆಡ್ಡಿಟ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಬಳಕೆದಾರರು ಈ ಘಟನೆಯನ್ನು “ಮುಕ್ತ ಗೂಂಡಾಗಿರಿ” ಎಂದು ಕರೆದಿದ್ದು, ಪ್ರಭಾವ ಮತ್ತು 'ಅಧಿಕಾರ' ಬಳಸಿಕೊಂಡು ಕಾನೂನನ್ನು ಲೆಕ್ಕಿಸದೆ ವರ್ತಿಸುವ ಪ್ರವೃತ್ತಿಯನ್ನು ಪ್ರಶ್ನಿಸಿದ್ದಾರೆ.

ನಿವೃತ್ತ ಸೈನಿಕ ಸಂಘಟನೆಗಳು ಹಾಗೂ ಸಾರ್ವಜನಿಕರು, ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News