×
Ad

ಕೇರಳ| ಸಿಪಿಐ(ಎಂ) ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್-ಬಿಜೆಪಿಯ 7 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

Update: 2026-01-08 23:40 IST

PC: onmanorama

ಕಣ್ಣೂರು (ಕೇರಳ), ಜ. 8: 2008ರ ಸಿಪಿಐ (ಎಂ)ನ ಸ್ಥಳೀಯ ನಾಯಕನ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್-ಬಿಜೆಪಿಯ 7 ಮಂದಿ ಕಾರ್ಯಕರ್ತರಿಗೆ ಇಲ್ಲಿನ ತಲಶ್ಶೇರಿಯ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಮಲ್ ಜೆ. ಅವರು, ಸುಮೀತ್ ಆಲಿಯಾಸ್ ಕುಟ್ಟನ್, ಕೆ.ಕೆ. ಪ್ರಜೇಶ್ ಬಾಬು, ಬಿ. ನಿಧಿನ್, ಕೆ. ಸನಲ್, ಸ್ಮಿಜೋಶ್, ಸಜೀಶ್ ಹಾಗೂ ವಿ. ಜಯೇಶ್ ದೋಷಿಗಳು ಎಂದು ಪರಿಗಣಿಸಿದರು.

ನ್ಯಾಯಾಲಯ ಸಂತೋಷ್ ಕುಮಾರ್, ಬಿ. ಶರತ್, ಇ.ಕೆ. ಶನೀಶ್ ಹಾಗೂ ಕುನ್ನುಂಪ್ರಾತ್ ಅಜೇಶ್‌ನನ್ನು ಖುಲಾಸೆಗಳಿಸಿದೆ. 8ನೇ ಆರೋಪಿ ಕೆ. ಅಜಿತ್ ವಿಚಾರಣೆ ವೇಳೆ ಮೃತಪಟ್ಟಿದ್ದಾನೆ.

ಆರೋಪಿಗಳು, ಅವರ ವಕೀಲರು ಹಾಗೂ ಸರಕಾರಿ ವಕೀಲರನ್ನು ಆಲಿಸಿದ ಬಳಿಕ ನ್ಯಾಯಾಲಯ ಅಪರಾಹ್ನ 7 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2008ರ ಡಿಸೆಂಬರ್ 31ರಂದು ಸಿಪಿಐ (ಎಂ)ನ ಸ್ಥಳೀಯ ನಾಯಕ ಲತೀಶ್ ಅವರನ್ನು ತಲಶ್ಶೇರಿಯ ತಲಾಯಿ ಸಮೀಪ ಕೊಚ್ಚಿ ಕೊಲೆಗೈದ ಪ್ರಕರಣ ಇದಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಲತೀಶ್ ಅವರ ಗೆಳೆಯ ಕೂಡ ಗಾಯಗೊಂಡಿದ್ದರು.

ಆರೋಪಿಗಳ ವಿರುದ್ಧ ಗಲಭೆ, ಕ್ರಿಮಿನಲ್ ಬೆದರಿಕೆ, ಪಿತೂರಿ, ಹತ್ಯೆ ಹಾಗೂ ಹತ್ಯೆಗೆ ಯತ್ನ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಹಾಗೂ 5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

2020 ಜನವರಿ 7ರಂದು ವಿಚಾರಣೆ ಆರಂಭವಾಗಿತ್ತು. 30 ಪ್ರಾಸಿಕ್ಯೂಷನ್ ಸಾಕ್ಷಿಗಳು, 90 ದಾಖಲೆಗಳು ಹಾಗೂ 27 ಭೌತಿಕ ವಸ್ತುಗಳನ್ನು ಪರಿಶೀಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News