ದಿಲ್ಲಿಯ ಮಸೀದಿ ನಿವೇಶನ ನೆಲಸಮಕ್ಕೆ ‘ಕರಾಳ’ ವಕ್ಫ್ ತಿದ್ದುಪಡಿ ಕಾಯ್ದೆಯೇ ಕಾರಣ: ಅಸಾದುದ್ದೀನ್ ಉವೈಸಿ ಆರೋಪ
PC: indiatoday
ಛತ್ರಪತಿ ಸಾಂಭಾಜಿನಗರ (ಮಹಾರಾಷ್ಟ್ರ),ಜ.8: ದಿಲ್ಲಿಯ ತುರ್ಕ್‌ಮನ್‌ಗೇಟ್ ಸಮೀಪದಲ್ಲಿರುವ ವಕ್ಫ್ ಮಾಲಕತ್ವದ ಆಸ್ತಿಯ ಭಾಗವೊಂದನ್ನು ನೆಲಸಮಗೊಳಿಸಿರುವುದಕ್ಕೆ ಕರಾಳವಾದ ವಕ್ಫ್ ತಿದ್ದುಪಡಿ ಕಾಯ್ದೆಯೇ ಕಾರಣವೆಂದು ಎಐಎಂಐಎಂ ವರಿಷ್ಠ ಅಸಾದುದ್ದೀನ್ ಉವೈಸಿ ಗುರುವಾರ ಆಪಾದಿಸಿದ್ದಾರೆ.
ತುರ್ಕ್‌ಮ್ಯಾನ್ ಗೇಟ್ ಸಮೀಪದ ಮಸೀದಿಯ ಆಸ್ತಿಯನ್ನು ನೆಲಸಮಗೊಳಿಸಲಾಗಿದೆ. 1970ರ ಅಧಿಸೂಚನೆ ಪ್ರಕಾರ ಇದೊಂದು ವಕ್ಫ್ ಆಸ್ತಿಯಾಗಿದೆ. ಸಂಸತ್‌ನಲ್ಲಿ ವಕ್ಫ್ ಕಾಯ್ದೆಯನ್ನು ಅಂಗೀಕರಿಸಿದ ಬಳಿಕ ನಡೆದಿರುವ ಈ ನೆಲಸಮ ಅಭಿಯಾನವು ಕೇವಲ ಆರಂಭವಷ್ಟೇ ಆಗಿದೆ. ದೇಶದ ಆಗುಹೋಗುಗಳನ್ನು ಜನರು ಅರಿತುಕೊಳ್ಳಬೇಕು ಹಾಗೂ ಅವರು ತಮ್ಮ ಮತಗಳ ಆಡಳಿತರೂಢ ಪಕ್ಷಗಳಿಗೆ ಬಲವಾದ ಸಂದೇಶವನ್ನು ನೀಡಬೇಕು ಎಂದರು.
1970ರಲ್ಲಿ ಪ್ರಕಟಿಸಲಾದ ಗಝೆಟ್ ಅಧಿಸೂಚನೆಯಲ್ಲಿ ಇದೊಂದು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದ್ದರೂ ಹೈಕೋರ್ಟ್ ತಪ್ಪಾದ ಆದೇಶವನ್ನು ಹೊರಡಿಸಿದೆ ಎಂದವರು ಆಪಾದಿಸಿದರು.
ಹೈಕೋರ್ಟ್ ಆದೇಶದ ಪುನರ್‌ಪರಿಶೀಲನೆ ಕೋರುವ ಅರ್ಜಿಯನ್ನು ಸಲ್ಲಿಸದೆ ಇರುವ ಮೂಲಕ ದಿಲ್ಲಿ ವಕ್ಫ್ ಮಂಡಳಿಯು ಸಮರ್ಪಕವಾದ ಕಾನೂನುಕ್ರಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದೀಗ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆಹೋಗಲಾಗುವುದು ಎಂದು ಉವೈಸಿ ತಿಳಿಸಿದರು.
ಈ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕನಾಥ ಶಿಂಧೆ, ಅಜಿತ್ ಪವಾರ್ ಹಾಗೂ ಚಂದ್ರಬಾಬು ನಾಯ್ಡು ಅವರ ಬೆಂಬಲದೊಂದಿಗೆ ರೂಪಿಸಿದ್ದಾರೆ. ನಮ್ಮ ಮಸೀದಿಗಳು ಹಾಗೂ ಕಬರಸ್ತಾನಗಳನ್ನು ಕಸಿದುಕೊಳ್ಳಲು ಇದನ್ನು ಬಳಸಲಾಗುತ್ತಿದೆ. ದಿಲ್ಲಿಯಲ್ಲಿ ನಡೆದಿರುವುದು ಕೇವಲ ಆರಂಭವಷ್ಟೇ’’ಎಂದು ಉವೈಸಿ ತಿಳಿಸಿದರು.
ಜನವರಿ 15ರಂದು ನಡೆಯಲಿರುವ ಮಹಾರಾಷ್ಟ್ರದ ನಗರಾಡಳಿತ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಅವರ ನೇತೃತ್ವದ ಪಕ್ಷಗಳನ್ನು ವಿರೋಧಿಸುವಂತೆ ಉವೈಸಿ ಮತದಾರರಿಗೆ ಕರೆ ನೀಡಿದರು.
ಈ ಕಾಯ್ದೆಯ ಜಾರಿಗೆ ಕಾರಣರಾದವರ ವಿರುದ್ಧ ಜನತೆ ಮತ ಚಲಾಯಿಸಬೇಕು ಹಾಗೂ ತಮ್ಮ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕಾದರೆ ಅವರು ಎಜಂಐಎಂ ಜೊತೆಗೆ ನಿಲ್ಲಬೇಕೆಂದು ಉವೈಸಿ ಆಗ್ರಹಿಸಿದರು.
ದಿಲ್ಲಿಯ ರಾಮಲೀಲಾ ಮೈದಾನ ಪ್ರದೇಶದಲ್ಲಿರುವ ಫೈಝೆ ಇಲಾಹಿ ಮಸೀದಿಯ ಸಮೀಪ ಮಂಗಳವಾರ ಹಾಗೂ ಬುಧವಾರದ ಮಧ್ಯ ರಾತ್ರಿ ನಡೆಸಲಾದ ಒತ್ತುವರಿ ವಿರೋಧಿ ಕಾರ್ಯಾಚರಣೆಯು ಪ್ರತಿಭಟನೆಗೆ ಕಾರಣವಾಯಿತು. . ತುರ್ಕ್‌ಮ್ಯಾನ್ ಗೇಟ್‌ನ ಎದುರಿಗಿರುವ ಮಸೀದಿಯನ್ನು ನೆಲಸಮಗೊಳಿಸಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಉದ್ರಿಕ್ತ ಜನರು ಪೊಲೀಸರೆಡೆಗೆ ಕಲ್ಲುತೂರಾಟ ನಡೆಸಿದ್ದರು.