×
Ad

ಚತ್ತೀಸ್‌ಗಢದ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ವಿಸ್ತರಣೆಗೆ ಕೇಂದ್ರದ ಅಸ್ತು

Update: 2026-01-08 20:16 IST

PC: newindianexpress

ಹೊಸದಿಲ್ಲಿ,ಜ.8: ಚತ್ತೀಸ್‌ಗಡದ ಬೈಲಾದಿಲಾ ಮೀಸಲು ಅರಣ್ಯದ 874.924 ಹೆಕ್ಟೇರ್ ಪ್ರದೇಶದಲ್ಲಿ ಸರಕಾರಿ ಸ್ವಾಮ್ಯದ ಎನ್‌ಎಂಡಿಸಿಯು ಕಬ್ಬಿಣದ ಆದಿರಿನ ಗಣಿಗಾರಿಕೆಯನ್ನು ವಿಸ್ತರಿಸುವುದಕ್ಕಾಗಿ ಪರಿಸರ ಅನುಮೋದನೆ ( ಇಸಿ) ನೀಡುವಂತೆ ಕೇಂದ್ರ ಪರಿಸರ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ.

ಬೈಲಾದಿಲಾ ಕಬ್ಬಿಣದ ಆದಿರು ಗಣಿಯ ನಿಕ್ಷೇಪ 11ರಲ್ಲಿ ಗಣಿಗಾರಿಕೆಯನ್ನು ನಡೆಸಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರ ಸಮಿತಿ (ಇಎಸಿ)ಯು ಅನುಮೋದನೆ ನೀಡಿದೆ.

ಕಬ್ಬಿಣದ ಆದಿರಿನ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕವಾಗಿ 11:30 ದಶಲಕ್ಷಟನ್‌ಗಳಿಂದ (ಎಂಟಿಪಿಎ) 14.50 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವ ಹಾಗೂ ತ್ಯಾಜ್ಯ ಉತ್ಖನನವನ್ನು 2.70 ಎಂಟಿಪಿಎನಿಂದ 15.39 ಎಂಟಿಪಿಎಗೆ ವಿಸ್ತರಿಸುವ ಉದ್ದೇಶದಿಂದ ಈ ಶಿಫಾರಸು ಮಾಡಲಾಗಿದೆ.

ಪರ್ವತವಲಯದಲ್ಲಿರುವ ಬೈಲಾದಿಲಾ ಮೀಸಲು ಅರಣ್ಯ ಪ್ರದೇಶವು ಉನ್ನತ ದರ್ಜೆಯ ಕಬ್ಬಿಣ ಅದಿರಿಗೆ ಖ್ಯಾತವಾಗಿದೆ. ಈ ಪ್ರದೇಶವು 558.84 ದಶಲಕ್ಷ ಟನ್(ಎಂಟಿ) ಕಬ್ಬಿಣದ ಆದಿರನ್ನು ಒಳಗೊಂಡಿದೆ.

ಎನ್‌ಎಂಡಿಸಿಯು ಈ ಹಿಂದೆಯೂ ಬೈಲಾದಿಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯ ವಿಸ್ತರಣೆಗಾಗಿ 2020 ಮಾರ್ಚ್‌ನಲ್ಲಿ ಕೇಂದ್ರ ಸರಕಾರದಿಂದ ಪಾರಿಸಾರಿಕ ಅನುಮೋದನೆಯನ್ನು ಪಡೆದಿದ್ದು, 17 ವರ್ಷಗಳವರೆಗೆ ಊರ್ಜಿತದಲ್ಲಿರಲಿದೆ ಹಾಗೂ 2037ರ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ಎನ್‌ಎಂಡಿಸಿಯ ಗಣಿಗಾರಿಕೆಯ ವಿಸ್ತರಣೆಯ ಪ್ರಸ್ತಾವವು ಪಾರಿಸಾರಿಕವಾಗಿ ಅದರಲ್ಲೂ ವಿಶೇಷವಾಗಿ ಪುರಾತನ ಮರಗಳು ಹಾಗೂ ಸ್ಥಳೀಯ ಜಲಮೂಲಗಳ ಸುರಕ್ಷತೆಯ ಕುರಿತು ಕಳವಳಗಳಿಗೆ ಕಾರಣವಾಗಿದೆ. ಎನ್‌ಎಂಡಿಸಿಯ ಗಣಿಗಾರಿಕಾ ವಿಸ್ತರಣೆಗೆ ಅನುಮೋದನೆ ದೊರೆಯುವುದನ್ನು ನಿರೀಕ್ಷಿಸಿದ್ದ ಸ್ಥಳೀಯ ಯುವಜನರು ದಾಂತೆವಾಡ ಮತ್ತಿತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News