ಸುಪ್ರೀಂ ಕೋರ್ಟ್ ಟೀಕೆ: ರಾಹುಲ್ ಗಾಂಧಿ ಬೆನ್ನಿಗೆ ನಿಂತ ಇಂಡಿಯಾ ಮೈತ್ರಿಕೂಟ
PC : AICC/PTI
ಹೊಸದಿಲ್ಲಿ,ಆ.6: ಚೀನಾ ಭಾರತದ ಭೂಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ ಎಂಬ ಹೇಳಿಕೆಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಸರ್ವೋಚ್ಚ ನ್ಯಾಯಾಲಯವು ತರಾಟೆಗೆತ್ತಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಿರುವ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ನ್ಯಾಯಾಲಯದ ಅಭಿಪ್ರಾಯಗಳನ್ನು ‘ಅನಗತ್ಯ’ ಎಂದು ಬಣ್ಣಿಸಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸರಕಾರವನ್ನು ಪ್ರಶ್ನಿಸುವುದು ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಪ್ರತಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ಪ್ರತಿಪಾದಿಸಿವೆ.
ಮಂಗಳವಾರ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸದನ ನಾಯಕರ ಸಭೆಯ ಬಳಿಕ ಹೊರಡಿಸಲಾದ ಹೇಳಿಕೆಯಲ್ಲಿ,ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ವಿಪಕ್ಷ ನಾಯಕರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಮತ್ತು ಇತರ ಪ್ರತಿಪಕ್ಷ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಚೀನಾದಿಂದ ಅತಿಕ್ರಮಣ ಕುರಿತು ರಾಹುಲ್ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣದ ವಿಚಾರಣೆಗೆ ಸೋಮವಾರ ತಡೆನೀಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು‘ನಿಜವಾದ ಭಾರತೀಯ ಇಂತಹ ಹೇಳಿಕೆಯನ್ನು ನೀಡುವುದಿಲ್ಲ’ ಎಂದು ಹೇಳಿತ್ತು. 2022ರಲ್ಲಿ ತನ್ನ ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್,ಚೀನಾ ಭಾರತದ 2,000 ಚ.ಕಿ.ಮೀ. ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಚೀನಿ ಸೇನೆಯು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯೋಧರನ್ನು ಥಳಿಸುತ್ತಿದೆ ಎಂದು ಹೇಳಿದ್ದರು.
ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ನ್ಯಾಯಾಧೀಶರು ‘ಅಸಾಧಾರಣ’ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಒಮ್ಮತದಿಂದ ಹೇಳಿರುವ ಇಂಡಿಯಾ ಮೈತ್ರಿಕೂಟದ ನಾಯಕರು, ಅದು ಅನಗತ್ಯವಾಗಿತ್ತು ಎಂದು ಬಣ್ಣಿಸಿದ್ದಾರೆ. ‘ನಮ್ಮ ಗಡಿಗಳನ್ನು ರಕ್ಷಿಸುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲಗೊಂಡಾಗ ಅದನ್ನು ಹೊಣೆಗಾರನಾಗಿಸುವುದು ಪ್ರತಿಯೊಬ್ಬ ಪ್ರಜೆಯ ನೈತಿಕ ಕರ್ತವ್ಯವಾಗಿದೆ’ ಎಂದು ಹೇಳಿಕೆಯು ತಿಳಿಸಿದೆ.
ಸಂಸತ್ ಸಂಕೀರ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ರಾಹುಲ್ ಗಾಂಧಿಯವರು ಸಶಸ್ತ್ರ ಪಡೆಗಳ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ ಎಂದು ಹೇಳುವ ಮೂಲಕ ತನ್ನ ಸೋದರನನ್ನು ಸಮರ್ಥಿಸಿಕೊಂಡರು. ‘ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಕ್ತಗೌರವದೊಂದಿಗೆ ನಾನು ಈ ಮಾತನ್ನು ಹೇಳುತ್ತಿದ್ದೇನೆ, ನಿಜವಾದ ಭಾರತೀಯ ಯಾರು ಎನ್ನುವುದನ್ನು ಅವರು ನಿರ್ಧರಿಸುವುದಿಲ್ಲ’ ಎಂದು ಅವರು ಪ್ರತಿಪಾದಿಸಿದರು.
ಸಂಸತ್ತಿನ ಒಳಗೆ ಮತ್ತು ಹೊರಗೆ ರಾಷ್ಟ್ರೀಯ ವಿಷಯಗಳನ್ನು ಎತ್ತುವುದು ಪ್ರತಿಪಕ್ಷದ ಕರ್ತವ್ಯವಾಗಿದೆ ಎಂದು ಹೇಳಿದ ಕಾಂಗ್ರೆಸ್ ಸಂಸದ ಗೌರವ ಗೊಗೊಯಿ ಅವರು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹೇಳಿಕೆಯನ್ನು ರಾಜಕೀಯ ಪಕ್ಷಗಳ ಹಕ್ಕುಗಳನ್ನು ಸೀಮಿತಗೊಳಿಸುವ ಪ್ರಯತ್ನ ಎಂದು ಪರಿಗಣಿಸಬೇಕು ಎಂದರು.