×
Ad

ಜಾಮೀನು ಅರ್ಜಿಗಳನ್ನು ಎರಡು ತಿಂಗಳುಗಳಲ್ಲಿ ನಿರ್ಧರಿಸಿ: ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

Update: 2025-09-13 15:57 IST

Photo credit: PTI

ಹೊಸದಿಲ್ಲಿ: ಕಕ್ಷಿದಾರರಿಂದಲೇ ವಿಳಂಬಗೊಳ್ಳುವ ಪ್ರಕರಣಗಳನ್ನು ಹೊರತುಪಡಿಸಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಅವುಗಳ ಸಲ್ಲಿಕೆಯ ಎರಡು ತಿಂಗಳೊಳಗೆ ನಿರ್ಧರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ ಉಚ್ಚ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ಬಾಕಿಯುಳಿದಿರುವ ಜಾಮೀನು ಮತ್ತು ನಿರೀಕ್ಷಣಾ ಜಾಮೀನುಗಳು ರಾಶಿಯಾಗುವುದನ್ನು ತಡೆಯಲು ಕಾರ್ಯವಿಧಾನಗಳನ್ನು ಸ್ಥಾಪಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

ವೈಯಕ್ತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಮಹತ್ವವನ್ನು ಒತ್ತಿ ಹೇಳಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು,ಜಾಮೀನು ಅರ್ಜಿಗಳನ್ನು ಬಾಕಿಯುಳಿಸುವುದು ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ನೇರವಾಗಿ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿತು.

ಅರ್ಜಿಗಳ ವಿಲೇವಾರಿಯಲ್ಲಿ ಸುದೀರ್ಘ ವಿಳಂಬವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಉದ್ದೇಶವನ್ನು ವಿಫಲಗೊಳಿಸುವುದು ಮಾತ್ರವಲ್ಲ,ಸಂವಿಧಾನದ 14 ಮತ್ತು 21ನೇ ವಿಧಿಗಳಲ್ಲಿ ಪ್ರತಿಪಾದಿಸಲಾಗಿರುವ ಸಾಂವಿಧಾನಿಕ ನೀತಿಗಳಿಗೆ ವಿರುದ್ಧವಾಗಿ ನ್ಯಾಯದ ನಿರಾಕರಣೆಗೆ ಸಮನಾಗುತ್ತದೆ ಎಂದು ಪೀಠವು ಹೇಳಿತು.

ವಿಧಿ 14 ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸಿದೆ ಹಾಗೂ ವಿಧಿ 21 ವ್ಯಕ್ತಿಯ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.

ಆಸ್ತಿ ದಾಖಲೆಗಳಲ್ಲಿ ವಂಚನೆ ಮತ್ತು ಫೋರ್ಜರಿ ಆರೋಪವನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಇಬ್ಬರು ಕಂದಾಯ ಅಧಿಕಾರಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ನಿರ್ದೇಶನಗಳನ್ನು ಹೊರಡಿಸಿದೆ.

2019ರಲ್ಲಿ ಅವರು ಸಲ್ಲಿಸಿದ್ದ ಅರ್ಜಿಗಳು ಸುಮಾರು ಆರು ವರ್ಷಗಳಿಂದ ಬಾಕಿಯಿದ್ದವು.

ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧದ ಗಂಭೀರ ಆರೋಪಗಳನ್ನು ಪರಿಗಣಿಸಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಹೇಳಿತಾದರೂ ಅವರ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವು ಸಮರ್ಥನೀಯವಲ್ಲ ಎಂದು ಬೆಟ್ಟು ಮಾಡಿತು.

ಅನಗತ್ಯ ವಿಳಂಬದಿಂದಾಗಿ ಆರೋಪಿಗಳು ಮತ್ತು ದೂರುದಾರರು ತೊಂದರೆಯನ್ನು ಅನುಭವಿಸದಂತೆ ಬಾಕಿ ಇರುವ ತನಿಖೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯವು ತನಿಖಾ ಸಂಸ್ಥೆಗಳಿಗೆ ಸೂಚಿಸಿತು.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಪ್ರಕಾರ,ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ 2.6 ಲ.ಕ್ಕೂ ಅಧಿಕ ಜಾಮೀನು ಅರ್ಜಿಗಳು ಬಾಕಿಯಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News