ಮುಂಬೈ ರೈಲು ಸ್ಫೋಟ ಪ್ರಕರಣ | 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
Photo credit: PTI
ಹೊಸದಿಲ್ಲಿ: 2006 ರ ಜುಲೈ 11 ರಂದು ನಡೆದ ಮುಂಬೈ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ತೀರ್ಪಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಲೋಕಲ್ ರೈಲಿನಲ್ಲಿ ನಡೆದಿದ್ದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ MCOCA (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ವಿಶೇಷ ನ್ಯಾಯಾಲಯವು ಆರೋಪಿಗಳಲ್ಲಿ ಐವರಿಗೆ ಮರಣದಂಡನೆ ಹಾಗೂ ಇತರ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಶಿಕ್ಷೆಯನ್ನು ಬಾಂಬ್ ಹೈಕೋರ್ಟ್ ರದ್ದುಗೊಳಿಸಿತ್ತು.
ಮಹಾರಾಷ್ಟ್ರ ಸರ್ಕಾರವು ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಗಳನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್ ತೀರ್ಪಿಗ ತಾತ್ಕಾಲಿಕ ತಡೆ ನೀಡಿದೆ. ಆದರೆ, ಹೈಕೋರ್ಟ್ ತೀರ್ಪಿನ ನಂತರ ಬಿಡುಗಡೆಗೊಂಡಿರುವ 12 ಆರೋಪಿಗಳನ್ನು ಪುನಃ ಜೈಲಿಗೆ ಕಳುಹಿಸುವ ಅಗತ್ಯವಿಲ್ಲ ಎಂಬುದಾಗಿ ಪೀಠ ಸ್ಪಷ್ಟಪಡಿಸಿದೆ.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಎಂಎಂ ಸುಂದ್ರೇಶ್ ಹಾಗೂ ನ್ಯಾಯಮೂರ್ತಿ ಎನ್ ಕೆ ಸಿಂಗ್ ಒಳಗೊಂಡ ಪೀಠದ ಮುಂದೆ ವಾದ ಮಂಡಿಸಿ, "ಆರೋಪಿಗಳು ಈಗ ಜೈಲಿನಲ್ಲಿ ಇರಬೇಕೆಂದು ನಾವು ಕೋರುವುದಿಲ್ಲ. ಆದರೆ ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ನಡೆದ ಕೆಲ ಅವಲೋಕನಗಳು ಭವಿಷ್ಯದಲ್ಲಿ MCOCA ಅಡಿಯಲ್ಲಿ ನಡೆಯುವ ಇತರ ಪ್ರಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, "ಎಲ್ಲಾ ಪ್ರತಿವಾದಿಗಳು ಈಗಾಗಲೇ ಬಿಡುಗಡೆಗೊಂಡಿದ್ದಾರೆ. ಅವರನ್ನು ಮತ್ತೆ ಜೈಲಿಗೆ ಕರೆತರುವ ಪ್ರಶ್ನೆಯೇ ಇಲ್ಲ. ಆದರೂ, ಸಾಲಿಸಿಟರ್ ಜನರಲ್ ಅವರ ವಾದನವನ್ನು ಗಮನಿಸಿ, ಆಕ್ಷೇಪಾರ್ಹ ತೀರ್ಪು ಪೂರ್ವನಿದರ್ಶನವಲ್ಲ ಎಂದು ನಾವು ಘೋಷಿಸುತ್ತೇವೆ. ತೀರ್ಪಿಗೆ ತಾತ್ಕಾಲಿಕ ತಡೆ ನೀಡಲಾಗಿದೆ" ಎಂದು ಉಲ್ಲೇಖಿಸಿತು.
2006 ರ ಜುಲೈ 11 ರಂದು ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಕೆಲ ಸ್ಥಳೀಯ ರೈಲುಗಳಲ್ಲಿನ ಸ್ಫೋಟಗಳಲ್ಲಿ 189 ಮಂದಿ ಸಾವನ್ನಪ್ಪಿ, 800 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸಂಬಂಧ ವಿಶೇಷ ನ್ಯಾಯಾಲಯವು 2015 ರಲ್ಲಿ ಐವರಿಗೆ ಮರಣದಂಡನೆ ಹಾಗೂ ಇತರ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಾಂಬೆ ಹೈಕೋರ್ಟ್ ಈ ತೀರ್ಪುಗಳನ್ನು ರದ್ದುಗೊಳಿಸಿತ್ತು.