×
Ad

ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿಯ ಮೇಲೆ ಕಾರು ಹತ್ತಿಸಿದ ಚಾಲಕ: ವಿಡಿಯೊ ವೈರಲ್

Update: 2025-05-06 00:10 IST

Photo credit: madhyamamonline.com

ಹೊಸದಿಲ್ಲಿ: ಹಾರ್ನ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಕಾರು ಚಾಲಕನೊಬ್ಬ ವಾಹನ ಹತ್ತಿಸಿರುವ ಆಘಾತಕಾರಿ ಘಟನೆ ದಿಲ್ಲಿಯ ಮಹಿಪಾಲ್ ಪುರ್ ಕ್ರಾಸ್ ಬಳಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಿಹಾರ ಮೂಲದ ರಾಜೀವ್ ಕುಮಾರ್ ಎಂಬ ಭದ್ರತಾ ಸಿಬ್ಬಂದಿಯೊಬ್ಬರು ದಿಲ್ಲಿ ವಿಮಾನ ನಿಲ್ದಾಣದ ಮೂರನೆಯ ಟರ್ಮಿನಲ್ ನಿಂದ ರಾತ್ರಿ ಪಾಳಿ ಮುಗಿಸಿಕೊಂಡು ಮಹಿಪಾಲ್ ಪುರ್ ನಲ್ಲಿರುವ ತನ್ನ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ರಾಜೀವ್ ಕುಮಾರ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ, ಹಿಂದಿನಿಂದ ಕಾರೊಂದು ಜೋರಾಗಿ ಹಾರ್ನ್ ಮಾಡುತ್ತಾ ಬಂದಿದೆ.

ಆ ಕಾರಿನ ಚಾಲಕ ವಿಜಯ್ ಎಂಬಾತನು ರಾಜೀವ್ ಕುಮಾರ್ ಬಳಿಯಿದ್ದ ಲಾಠಿಯನ್ನು ನೀಡುವಂತೆ ಒತ್ತಾಯಿಸಿದಾಗ, ಕಾರಿನ ಹಾರ್ನ್ ಅನ್ನು ನಿಲ್ಲಿಸುವಂತೆ ಆತನಿಗೆ ರಾಜೀವ್ ಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ತಮ್ಮ ಬಳಿಯಿದ್ದ ಲಾಠಿಯನ್ನು ನೀಡಲು ಅವರು ನಿರಾಕರಿಸಿದಾಗ, ನೀನು ರಸ್ತೆ ದಾಟುವಾಗ, ನಿನ್ನ ಮೇಲೆ ಕಾರು ಹರಿಸುವುದಾಗಿ ಅವರಿಗೆ ಕಾರಿನ ಚಾಲಕ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಲಾಗಿದೆ.

ಅದರಂತೆ ರಾಜೀವ್ ಕುಮಾರ್ ರಸ್ತೆಯನ್ನು ದಾಟುವಾಗ, ಕಾರು ಅವರಿಗೆ ಗುದ್ದಿದ್ದು, ಅವರು ನೆಲದ ಮೇಲೆ ಅಂಗಾತ ಬೀಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ ಅಪಘಾತದಲ್ಲಿ ರಾಜೀವ್ ಕುಮಾರ್ ಅವರಿಗೆ ಕಾಲಿನ ಮೂಳೆ ಮುರಿದಿದ್ದು, ಇನ್ನಿತರ ಗಾಯಗಳೂ ಆಗಿವೆ ಎಂದು ವರದಿಯಾಗಿದೆ.

ತಕ್ಷಣವೇ ರಾಜೀವ್ ಕುಮಾರ್ ರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕಾರಿನ ಚಾಲಕ ವಿಜಯ್ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆಲವೇ ಹೊತ್ತಿನಲ್ಲಿ ಆರೋಪಿ ಕಾರು ಚಾಲಕ ವಿಜಯ್ ನನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News