×
Ad

ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಯಡವಟ್ಟು ಮಾಡಿ ಟ್ರೋಲ್‌ಗೆ ಒಳಗಾದ ಐಎಎಸ್ ಅಧಿಕಾರಿ ಟೀನಾ ದಾಬಿ!

Update: 2026-01-27 15:46 IST

Screengrab: X

ಜೈಪುರ: ರಾಜಸ್ಥಾನದ ಬಾರ್ಮರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೆ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬಾರ್ಮರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ವೇಳೆ ಜಿಲ್ಲಾಧಿಕಾರಿ ಟೀನಾ ದಾಬಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದು, ಬಳಿಕ ಬೆನ್ನು ತಿರುಗಿಸಿ ವಿರುದ್ಧ ದಿಕ್ಕಿನಲ್ಲಿ ಸಲ್ಯೂಟ್ ಮಾಡುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಅಧಿಕಾರಿ ತಕ್ಷಣವೇ ಅವರಿಗೆ ಮಾರ್ಗದರ್ಶನ ನೀಡಿದ್ದು, ಬಳಿಕ ಅವರು ರಾಷ್ಟ್ರಧ್ವಜಕ್ಕೆ ಸಲ್ಯೂಟ್ ಮಾಡಿದ್ದಾರೆ.

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಕೆಲವರು ಇದನ್ನು ಧ್ವಜಾರೋಹಣ ಸಮಾರಂಭದ ವೇಳೆ ನಡೆದ ಪ್ರೋಟೋಕಾಲ್ ದೋಷವೆಂದು ಹೇಳಿದರೆ, ಇನ್ನು ಕೆಲವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಭವಿಸಬಹುದಾದ ಸಣ್ಣ ಲೋಪ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೀಡಿಯೊ ಹೆಚ್ಚು ವೈರಲ್‌ ಆಗಿರುವುದಲ್ಲೆದೆ ಗೂಗಲ್ ಸರ್ಚ್‌ನಲ್ಲೂ “ಟೀನಾ ದಾಬಿ” ಟ್ರೆಂಡ್ ಆಗಲು ಆರಂಭವಾಯಿತು. ರಾಷ್ಟ್ರೀಯ ಕಾರ್ಯಕ್ರಮಗಳ ವೇಳೆ ಹಿರಿಯ ನಾಗರಿಕ ಸೇವಾಧಿಕಾರಿಗಳ ಮೇಲೆ ಇರುವ ನಿರೀಕ್ಷೆಗಳ ಬಗ್ಗೆ ಅನೇಕ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಟೀನಾ ದಾಬಿಯವರು ಹಿರಿಯ ಅಧಿಕಾರಿಯಾಗಿದ್ದು, ಇಂತಹ ಲೋಪ ಹೇಗೆ ಸಂಭವಿಸಿದೆ ಎಂದು ಕೆಲ ವಿಮರ್ಶಕರು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು "ತಪ್ಪುಗಳನ್ನು ಮಾಡುವುದು ಮಾನವ ಸಹಜ. ಉನ್ನತ ಹುದ್ದೆಗಳಲ್ಲಿರುವ ಜನರು ಪರಿಪೂರ್ಣರಾಗಿರಬೇಕು ಎಂದು ನಾವು ಹೆಚ್ಚಾಗಿ ನಿರೀಕ್ಷಿಸುತ್ತೇವೆ. ಆದರೆ ದೊಡ್ಡ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ, ಸಣ್ಣ ಮಾನವ ತಪ್ಪುಗಳು ಸಂಭವಿಸಬಹುದು. ಇದಕ್ಕಾಗಿ ಅವರನ್ನು ಟ್ರೋಲ್‌ ಮಾಡುವುದು ಸರಿಯಲ್ಲ" ಎಂದು ಟೀನಾ ದಾಬಿ ಅವರನ್ನು ಬೆಂಬಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News