ಸಂದೇಶಖಾಲಿ ಸಿಬಿಐ ದಾಳಿ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

Update: 2024-04-27 11:12 GMT

ಸಿಬಿಐ,  ಚುನಾವಣಾ ಆಯೋಗ |  PC : PTI 

ಕೊಲ್ಕತ್ತಾ: ಸಂದೇಶಖಾಲಿಯಲ್ಲಿ ಖಾಲಿ ಸ್ಥಳವೊಂದರಲ್ಲಿ ಸಿಬಿಐ ಚುನಾವಣಾ ದಿನವಾದ ಎಪ್ರಿಲ್‌ 26ರಂದು ದಾಳಿ ನಡೆಸಿದೆ ಎಂದು ಆರೋಪಿಸಿ ಸಿಬಿಐ ಹಾಗೂ ಎನ್‌ಎಸ್‌ಜಿ ವಿರುದ್ಧ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸರ್ಕಾರವು ಚುನಾವಣಾ ಆಯೋಗಕ್ಕೆ ದೂರಿದೆ.

ಈ ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆಯೆನ್ನಲಾದ ಶಸ್ತ್ರಾಸ್ತ್ರಗಳು ಅಲ್ಲಿಯೇ ಇದ್ದವೇ ಅಥವಾ ಅವುಗಳನ್ನು ಅಲ್ಲಿ ಉದ್ದೇಶಪೂರ್ವಕವಾಗಿ ಇರಿಸಿ ನಂತರ ವಶಪಡಿಸಿಕೊಳ್ಳಲಾಗಿತ್ತೇ ಎಂದು ನಿಶ್ಚಿತವಾಗಿ ತಿಳಿಯುವ ಹಾದಿಯಿಲ್ಲ ಎಂದು ದೂರಿನಲ್ಲಿ ಸರ್ಕಾರ ಹೇಳಿದೆ.

“ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದರೂ ರಾಜ್ಯ ಸರ್ಕಾರ ಅಥವಾ ಪೊಲೀಸರಿಗೆ ಯಾವುದೇ ಪೂರ್ವ ಸೂಚನೆ ನೀಡಿದೆ ಸಿಬಿಐ ದಾಳಿ ನಡೆದಿದೆ. ಸಿಬಿಐಗೆ ಅಗತ್ಯವಿದ್ದಿದ್ದರೆ ರಾಜ್ಯ ಪೊಲೀಸ್‌ ಪಡೆ ಬಳಿ ಬಾಂಬ್‌ ನಿಷ್ಕ್ರಿಯ ದಳವಿರುವುದರಿಂದ ಈ ಕಾರ್ಯಾಚರಣೆಗೆ ಅದು ಸಹಕರಿಸಬಹುದಿತ್ತು,” ಎಂದು ದೂರಿನಲ್ಲಿ ಹೇಳಲಾಗಿದೆ.

ಉಚ್ಚಾಟಿತ ಟಿಎಂಸಿ ನಾಯಕ ಶೇಖ್‌ ಶಹಜಹಾನ್‌ ಅವರ ಸಮೀಪವರ್ತಿಗೆ ಸಂದೇಶಖಾಲಿಯಲ್ಲಿ ಸೇರಿದ ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಪೊಲೀಸ್‌ ಸರ್ವಿಸ್‌ ರಿವಾಲ್ವರ್‌ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಶುಕ್ರವಾರ ಹೇಳಿದ ನಂತರದ ಬೆಳವಣಿಗೆ ಇದಾಗಿದೆ.

ಶೇಖ್‌ ಅವರು ನೀಡಿದ್ದಾರೆನ್ನಲಾದ ಪ್ರಚೋದನೆಯಿಂದ ಗುಂಪೊಂದು ಜನವರಿಯಲ್ಲಿ ಇಡಿ ತಂಡದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಶುಕ್ರವಾರದ ಕಾರ್ಯಾಚರಣೆ ನಡೆದಿತ್ತು.

ಶೋಧ ನಡೆದ ಮನೆಯ ಮಾಲೀಕ ಅಬು ತಾಲಿಬ್‌ ಮೊಲ್ಲಾಹ್‌, ಮನೆಯಲ್ಲಿ ಇಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರ ಏಕೆ ಸಂಗ್ರಹಿಸಲಾಗಿತ್ತೆಂದು ತಿಳಿದು ಬಂದಿಲ್ಲ ಎಂದಿದ್ದರು.

ಈ ಕುರಿತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿ, ಟಿಎಂಸಿಯನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News