ಕೆ.ಎಲ್. ರಾಹುಲ್ ಗೆ ಛೀಮಾರಿ: ಎಲ್‌ ಎಸ್‌ ಜಿ ಮಾಲಕನ ವಿರುದ್ಧ ಅಭಿಮಾನಿಗಳ ಆಕ್ರೋಶ

Update: 2024-05-09 04:47 GMT

ಹೊಸದಿಲ್ಲಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯಾಂಕ ಅವರು ನಾಯಕ ಕೆ.ಎಲ್. ರಾಹುಲ್ ಅವರಿಗೆ ಛೀಮಾರಿ ಹಾಕಿರುವ ಕ್ರಮಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಎಸ್ ಆರ್ ಎಚ್ ಆರಂಭಿಕ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್, ನಂಬಲಸಾಧ್ಯ ವೇಗದಲ್ಲಿ ಎಲ್ ಎಸ್ ಜಿ ನೀಡಿದ ಗುರಿಯನ್ನು ತಲುಪಿ 10 ವಿಕೆಟ್ ಗಳ ಭರ್ಜರಿ ಜಯಕ್ಕೆ ಕಾರಣರಾಗಿದ್ದರು. ಎಲ್ ಎಸ್ ಜಿ ಡಗೌಟ್ ಬಳಿ ರಾಹುಲ್ ಜತೆ ಗೊಯಾಂಕ ಮಾತನಾಡುವ ವೇಳೆ ಕೋಪ ವ್ಯಕ್ತಪಡಿಸುತ್ತಿರುವುದು ಕಾಣಿಸುತ್ತಿದ್ದು, ಅಭಿಮಾನಿಗಳು ಇದನ್ನು ಅಸಹ್ಯಕರ ಎಂದು ಹೇಳಿದ್ದಾರೆ.

ಎಲ್‌ ಎಸ್‌ ಜಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ್ದು, ಎಸ್‌ ಆರ್‌ ಎಚ್ ‌ ಕೇವಲ 9.4 ಓವರ್ ಗಳಲ್ಲಿ 10 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿದರು. ಇನಿಂಗ್ಸ್ ನಲ್ಲಿ 14 ಸಿಕ್ಸರ್ ಹಾಗೂ 16 ಬೌಂಡರಿಗಳನ್ನು ಸಿಡಿಸಿದರು. ಹೆಡ್ ಹಾಗೂ ಅಭಿಷೇಕ್ ಕ್ರಮವಾಗಿ 30 ಎಸೆತಗಳಲ್ಲಿ 89 ರನ್ ಹಾಗೂ 28 ಎಸೆತಗಳಲ್ಲಿ 75 ರನ್ ಗಳಿಸಿದರು.

ಗೊಯಾಂಕ ಅವರು ರಾಹುಲ್ ಜತೆ ಕಟುವಾಗಿ ಮಾತನಾಡುತ್ತಿರುವ ದೃಶ್ಯ ಪ್ರಸಾರವಾಗಿದೆ. ವೀಕ್ಷಕ ವಿವರಣೆಗಾರರು ಇದನ್ನು "ನೀವು ಈ ಮಾತುಕತೆಯುನ್ನು ಮುಚ್ಚಿದ ಕೊಠಡಿಯಲ್ಲಿ ಮಾಡಬೇಕು. ಹಲವು ಕ್ಯಾಮೆರಾಗಳು ಏನನ್ನೂ ತಪ್ಪಿಸಿಕೊಳ್ಳುವುದಿಲ್ಲ. ರಾಹುಲ್ ಪತ್ರಿಕಾಗೋಷ್ಠಿಗೂ ಹೋಗುವುದಿಲ್ಲ. ಇಲ್ಲಿ ತಾಳ್ಮೆ ಕಳೆದುಕೊಳ್ಳದೇ ರಾಹುಲ್ ಒಳ್ಳೆಯ ಕೆಲಸ ಮಾಡಿದ್ದಾರೆ" ಎಂದು ವಿವರಿಸಿದ್ದರು.

ಈ ಪ್ರಹಸನಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, "ತೆರೆದ ಡ್ರೆಸ್ಸಿಂಗ್ ರೂಮ್" "ಕೆಟ್ಟ ಅಭಿರುಚಿಯ ಚರ್ಚೆ" "ಸ್ವೀಕಾರಾರ್ಹವಲ್ಲ" ಎಂದು ಬಣ್ಣಿಸಿ, ರಾಹುಲ್ ತಕ್ಷಣ ಎಲ್‌ ಎಸ್‌ ಜಿ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News