ಗುಜರಾತ್: ಬೋಗಸ್‌ ಮತದಾನ ಮಾಡಿ ಲೈವ್‌ ಸ್ಟ್ರೀಮಿಂಗ್‌ ಮಾಡಿದ ಇಬ್ಬರು ಬಿಜೆಪಿ ಸದಸ್ಯರ ಬಂಧನ

Update: 2024-05-09 06:27 GMT

Photo credit: indiatoday.in

‌ಅಹ್ಮದಾಬಾದ್: ಗುಜರಾತ್‌ನ ದಹೋದ್‌ ಲೋಕಸಭಾ ಕ್ಷೇತ್ರವಿರುವ ಮಹಿಸಾಗರ್‌ ಜಿಲ್ಲೆಯಲ್ಲಿ ಬೋಗಸ್ ಮತದಾನ ಮಾಡಿದ್ದೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಲೈವ್‌ಸ್ಟ್ರೀಮ್‌ ಮಾಡಿ ಅದನ್ನು ವೈರಲ್‌ ಆಗಿಸಿದ ಆರೋಪದ ಮೇಲೆ ಇಬ್ಬರು ಬಿಜೆಪಿ ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ.

ಈ ಆರೋಪಿಗಳು ಸಂತ್ರಂಪುರ್‌ನ ಗೋತಿಬ್‌ ತಾಲೂಕ ಪಂಚಾಯತ್‌ ವ್ಯಾಪ್ತಿಯ 25 ಮತಗಟ್ಟೆಗಳಲ್ಲಿಯೂ ಈ ಇಬ್ಬರು ಆರೋಪಿಗಳು ನಕಲಿ ಮತದಾನ ಮಾಡಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ.

ಆರೋಪಿಗಳಲ್ಲೊಬ್ಬನಾದ ವಿಜಯ್‌ ಭಾಭೋರ್‌ (28) ಎಂಬಾತ ಬೋಗಸ್‌ ಮತದಾನ ಮಾಡುವ ದೃಶ್ಯವನ್ನು ತನ್ನ ಫೇಸ್ಬುಕ್‌ ಖಾತೆಯ ಮೂಲಕ ಲೈವ್‌ ಸ್ಟ್ರೀಮ್‌ ಮಾಡಿದ್ದ. ಆ ವೀಡಿಯೋದಲ್ಲಿ ಆತ ಪ್ರಥಂಪುರ್‌ ಎಂಬಲ್ಲಿನ ಮತಗಟ್ಟೆಗೆ ಪ್ರವೇಶಿಸಿ, ಅಲ್ಲಿನ ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ತನ್ನ ಕೃತ್ಯ ಮುಂದುವರಿಸುತ್ತಾ “ನಮಗೆ 10 ನಿಮಿಷ ನೀಡಿ, ನಾವಿಲ್ಲಿ ಕುಳಿತುಕೊಂಡಿದ್ದೇವೆ, ಅದು ಬೆಳಗ್ಗಿನಿಂದ ನಡೆಯುತ್ತದೆ. ಅದು ಹಾಗೆ ಕಾರ್ಯನಿರ್ವಹಿಸುವುದಿಲ್ಲ. ಬಿಜೆಪಿಗೆ ಮಾತ್ರ ಚಲಾಯಿಸಲು ಸಾಧ್ಯ, ಯಂತ್ರ ನಮ್ಮಪ್ಪನಿಗೆ ಸೇರಿದ್ದು,” ಎಂದು ಹೇಳುವುದು ಕೇಳಿಸುತ್ತದೆ.

ಬಿಜೆಪಿ ಸಂಸದ ಹಾಗೂ ಹಾಲಿ ಅಭ್ಯರ್ಥಿ ಜಸ್ವಂತ್‌ಸಿಂಗ್‌ ಬಾಭೊರ್‌ ಪರ ತಾವರೆ ಚಿಹ್ನೆಗೆ ಗುಂಡಿ ಒತ್ತುವಂತೆ ಆತ ಇತರರಿಗೆ ಹೇಳುತ್ತಾನಲ್ಲದೆ, ಇವಿಎಂ ಹಿಡಿದುಕೊಂಡು ನರ್ತಿಸುತ್ತಾ, ತನ್ನ ಸಹವರ್ತಿಗೆ ತಾನು ಈ ಪ್ರದೇಶದ ನಿಯಂತ್ರಣ ಹೊಂದಿರುವುದಾಗಿ ತಿಳಿಸುತ್ತಾನೆ.

ಜನಪ್ರತಿನಿಧಿತ್ವ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳನ್ವಯ ಬಾಭೊರ್‌ ಹಾಗೂ ಮನೋಜ್‌ ಮಗನ್‌ (38) ಎಂಬಾತನನ್ನು ಬಂಧಿಸಲಾಗಿದೆ. ಇಬ್ಬರೂ ಬಿಜೆಪಿ ಸದಸ್ಯರಾಗಿದ್ದು ವಿಜಯ್‌ ಬಾಭೊರ್‌ ತಂದೆ ರಮೇಶ್‌ ಬಾಭೊರ್‌ ಸಂತ್ರಂಪುರ್‌ ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿದ್ದಾರೆ.

ಈ ಘಟನೆ ಸಂಬಂಧ ದಾಹೊದ್‌ ಚುನಾವಣಾಧಿಕಾರಿಯಿಂದ ವರದಿ ಕೇಳಲಾಗಿದೆ. ಪ್ರಥಂಪುರ್‌ ಮತಗಟ್ಟೆಯ ನಾಲ್ಕು ಅಧಿಕಾರಿಗಳ ವಿರುದ್ಧ ಶೋಕಾಸ್‌ ನೋಟಿಸ್‌ ಕೂಡ ಜಾರಿಗೊಳಿಸಲಾಗಿದೆ ಎಂದು ಮಹಿಸಾಗರ್‌ ಡಿಇಒ ನೇಹಾ ಕುಮಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News