×
Ad

ಜ. ಬಿಪಿನ್‌ ರಾವತ್‌ ಅವರನ್ನು ಬಲಿ ಪಡೆದ ಹೆಲಿಕಾಪ್ಟರ್‌ ದುರಂತದ ತನಿಖೆ ಸ್ಥಗಿತಗೊಳಿಸಿದ ತಮಿಳುನಾಡು ಪೊಲೀಸರು

Update: 2023-11-28 16:43 IST

Photo: PTI

ಚೆನ್ನೈ: ಭಾರತದ ಮೊದಲ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮತ್ತು 12 ಮಂದಿ ಸೇನಾ ಸಿಬ್ಬಂದಿಗಳನ್ನು ಬಲಿ ಪಡೆದ ಡಿಸೆಂಬರ್‌ 8, 2021 ರಂದು ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ಪತನದ ಕುರಿತು ತನಿಖೆಯನ್ನು ತಮಿಳುನಾಡು ಪೊಲೀಸರು ಸ್ಥಗಿತಗೊಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ದಂಡ ಸಂಹಿತೆಯ ಸೆಕ್ಷನ್‌ 174 ಅನ್ವಯ ಪ್ರಕರಣ ದಾಖಲಿಸಿದ್ದ ಅಪ್ಪರ್‌ ಕೂನೂರು ಪೊಲೀಸರಿಗೆ ಪತನಗೊಂಡ ಹೆಲಿಕಾಫ್ಟರ್‌ನ ಫ್ಲೈಟ್‌ ಡೇಟಾ ರೆಕಾರ್ಡರ್‌, ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಹಾಗೂ ಹವಾಮಾನ ಕ್ಲಿಯರೆನ್ಸ್‌ ವರದಿ ಕುರಿತ ಪ್ರಮುಖ ಪುರಾವೆಗಳ ಕುರಿತು ಮಾಹಿತಿಯ ಕೊರತೆಯಿಂದಾಗಿ ಆವರು ತನಿಖೆ ಬಾಕಿಯಿರಿಸಿದ್ದರು ಎಂದು thefederal.com ವರದಿ ಮಾಡಿದೆ.

ಮೇಲಿನ ಯಾವುದೇ ಮಾಹಿತಿಯನ್ನು ವಾಯುಪಡೆ ಅಧಿಕಾರಿಗಳು ತನಿಖಾಧಿಕಾರಿಗಳೊಂದಿಗೆ ಹಂಚಿಕೊಂಡಿರದೇ ಇದ್ದುದರಿಂದ ತನಿಖೆ ಸಾಧ್ಯವಾಗಿರಲಿಲ್ಲ. ರಕ್ಷಣಾ ಗೌಪ್ಯತೆ ವಿಭಾಗದಲ್ಲಿ ಈ ಮಾಹಿತಿ ಬರುತ್ತದೆ ಎಂಬ ಉತ್ತರ ನೀಡಲಾಗಿತ್ತಲ್ಲದೆ ಮಾಹಿತಿಗಾಗಿ ಏರೋಸ್ಪೇಸ್‌ ಸೇಫ್ಟಿ ಡೈರೆಕ್ಟರೇಟ್‌ ಅನ್ನು ಸಂಪರ್ಕಿಸುವಂತೆಯೂ ಸೂಚಿಸಲಾಗಿತ್ತು.

ಕೊಯಂಬತ್ತೂರಿನ ಸೂಲೂರು ವಾಯು ನೆಲೆಯಿಂದ ನೀಲಗಿರಿಯ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್‌ ಕಾಲೇಜಿನತ್ತ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಸಂಚರಿಸುತ್ತಿದ್ದಾಗ, ಲ್ಯಾಂಡಿಂಗ್‌ಗೆ ಕೆಲವೇ ನಿಮಿಷಗಳಿವೆ ಎನ್ನುವಾಗ ಪತನಗೊಂಡಿತ್ತು.

ಹವಾಮಾನದಲ್ಲುಂಟಾದ ಅನಿರೀಕ್ಷಿತ ಬದಲಾವಣೆಯಿಂದಾಗಿ ಈ ಪತನ ಸಂಭವಿಸಿದೆ ಎಂದು ಟ್ರೈ-ಸರ್ವಿಸ್‌ ತನಿಖೆ ಕಂಡುಕೊಂಡಿತ್ತು ಈ ವರದಿಯನ್ನು ಜನವರಿ 14, 2022ರಂದು ಸಲ್ಲಿಸಲಾಗಿತ್ತು. ಇದೊಂದು ವಿಧ್ವಂಸಕ ಕೃತ್ಯವಲ್ಲ, ನಿರ್ಲಕ್ಷ್ಯದಿಂದ ಅಥವಾ ತಾಂತ್ರಿಕ ವೈಫಲ್ಯದಿಂದ ಉಂಟಾಗಿಲ್ಲ ಎಂದು ಕೋರ್ಟ್‌ ಆಫ್‌ ಇಂಕ್ವೈರಿ ಕಂಡುಕೊಂಡಿತ್ತು ಎಂದು ವಾಯುಪಡೆ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News