×
Ad

ಏರ್ ಪ್ಯೂರಿಫೈಯರ್‌ಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಕೇಂದ್ರದಿಂದ ವಿರೋಧ

“ಇದು ವೈದ್ಯಕೀಯ ಸಾಧನವಲ್ಲ” ಎಂದು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

Update: 2025-12-26 16:21 IST

ಸಾಂದರ್ಭಿಕ ಚಿತ್ರ | Photo Credit : freepik.com

ಹೊಸದಿಲ್ಲಿ: ಏರ್ ಪ್ಯೂರಿಫೈಯರ್‌ಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡಿ ಅವುಗಳನ್ನು ವೈದ್ಯಕೀಯ ಸಾಧನಗಳು ಎಂದು ವರ್ಗೀಕರಿಸಬೇಕೆಂದು ಕೋರಿ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಸರಕಾರ ಶುಕ್ರವಾರ ವಿರೋಧಿಸಿದೆ.

“ಇದು ವೈದ್ಯಕೀಯ ಸಾಧನವಲ್ಲ, ಜಿಎಸ್ಟಿ ಮಂಡಳಿಯು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ವೈದ್ಯಕೀಯ ಸಾಧನಗಳ ವರ್ಗೀಕರಣವನ್ನು ವಿವರವಾದ ಪರಿಶೀಲನೆಗಳ ನಂತರ ಆರೋಗ್ಯ ಸಚಿವಾಲಯ ಮಾಡುತ್ತದೆ. ಜಿಎಸ್‌ಟಿ ಮಂಡಳಿಯಲ್ಲ" ಎಂದು ಕೇಂದ್ರ ಸರಕಾರ ತಿಳಿಸಿದೆ.

ಈ ಕುರಿತ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಮತ್ತು ನ್ಯಾಯಮೂರ್ತಿ ವಿನೋದ್ ಕುಮಾರ್ ಅವರ ಪೀಠ ನಡೆಸಿದೆ.

ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್, ಗಾಳಿ ಶುದ್ಧೀಕರಣ ಯಂತ್ರಗಳ ಮೇಲಿನ ಜಿಎಸ್ಟಿ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಚರ್ಚಿಸಲು ಯಾವುದೇ ತುರ್ತು ಜಿಎಸ್‌ಟಿ ಕೌನ್ಸಿಲ್ ಸಭೆ ಕರೆಯಲಾಗಿಲ್ಲ. ಈ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಕೇವಲ ಎರಡು ದಿನಗಳಲ್ಲಿ ಈ ಅರ್ಜಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಈ ವಿಷಯದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಸಮಯಾವಕಾಶದ ಅಗತ್ಯವಿದೆ ಎಂದು ಹೇಳಿದ್ದಾರೆ.

ವಾಯು ಮಾಲಿನ್ಯದ ಸಮಸ್ಯೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಜೀವರಕ್ಷಕ ಉಪಕರಣಗಳ ವರ್ಗಕ್ಕೆ ಸೇರಿಸಿ ಜಿಎಸ್‌ಟಿ ದರವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿ ದಿಲ್ಲಿ ಹೈಕೋರ್ಟ್‌ ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News