×
Ad

ಕೇರಳ| 6 ನಗರಪಾಲಿಕೆಗೆ ನೂತನ ಮೇಯರ್‌ಗಳ ಆಯ್ಕೆ

► ಕೊಚ್ಚಿ, ಕಣ್ಣೂರು, ತ್ರಿಶೂರ್,ಕೊಲ್ಲಂನಲ್ಲಿ ಯುಡಿಎಫ್ ► ಕೋಝಿಕ್ಕೋಡ್‌ನಲ್ಲಿ ಎಲ್‌ಡಿಎಫ್, ತಿರುವನಂತಪುರದಲ್ಲಿ ಬಿಜೆಪಿ

Update: 2025-12-26 20:52 IST

ಡಾ. ನಿಜ್ಜಿ ಜಸ್ಟಿನ್ , ವಿ.ಕೆ. ಮಿನಿಮೋಳ್ | Photo Credit : X 

ತಿರುವನಂತಪುರ,ಡಿ.26: ಕೇರಳದ ಎಲ್ಲಾ ಆರು ಮಹಾನಗರಪಾಲಿಕೆಗಳಿಗೆ ಶುಕ್ರವಾರ ನೂತನ ಮೇಯರ್‌ಗಳ ಆಯ್ಕೆಯಾಗಿದ್ದು, ನಾಲ್ಕು ಮೇಯರ್ ಸ್ಥಾನಗಳು ಕಾಂಗ್ರೆಸ್ ನೇತೃತ್ವದ ಐಕ್ಯ ಪ್ರಜಾಪ್ರಭುತ್ವ ರಂಗ (ಯುಡಿಎಫ್)ದ ಪಾಲಾಗಿದೆ. ಸಿಪಿಎಂ ನೇತೃತ್ವದ ಎಡಪ್ರಜಾಪ್ರಭುತ್ವ ರಂಗ (ಎಲ್‌ಡಿಎಫ್) ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ತಲಾ ಒಂದು ಮೇಯರ್ ಹುದ್ದೆ ದೊರೆತಿದೆ.  

ಕಾಂಗ್ರೆಸ್‌ನ ಕೌನ್ಸಿಲರ್‌ಗಳಾದ ವಿ.ಕೆ. ಮಿನಿಮೋಳ್, ಪಿ. ಇಂದಿರಾ,ಡಾ. ನಿಜ್ಜಿ ಜಸ್ಟಿನ್ ಹಾಗೂ ಎ.ಕೆ.ಹಾಫೀಝ್ ಅವರು ಕ್ರಮವಾಗಿ ಕೊಚ್ಚಿ, ಕಣ್ಣೂರು, ತ್ರಿಶೂರು ಹಾಗೂ ಕೊಲ್ಲಂ ಮಹಾನಗರಪಾಲಿಕೆಗಳ ಮೇಯರ್‌ಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಕಲ್ಲಿಕೋಟೆ ಮಹಾನಗರ ಪಾಲಿಕೆಯಲ್ಲಿ ಎಡರಂಗದ ಕೌನ್ಸಿಲರ್ ಓ.ಸದಾಶಿವನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಬಿಜೆಪಿಯ ವಿ.ವಿ. ರಾಜೇಶ್ ಅವರು ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೇರಳದ ಮಹಾನಗರ ಪಾಲಿಕೆಯೊಂದರ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿರುವುದು ಇದೇ ಮೊದಲ ಸಲವಾಗಿದೆ.

ಇದರೊಂದಿಗೆ ರಾಜಧಾನಿ ತಿರುವನಂತಪುರದ ಮಹಾನಗರಪಾಲಿಕೆಯಲ್ಲಿ ಎಡರಂಗದ ನಾಲ್ಕು ದಶಕಗಳ ಆಳ್ವಿಕೆ ಕೊನೆಗೊಂಡಂತಾಗಿದೆ.

ಇತ್ತೀಚೆಗೆ ನಡೆದ ತಿರುವನಂತಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಚುನಾವಣೆ ನಡೆದ 101 ಸ್ಥಾನಗಳ ಪೈಕಿ ಬಿಜೆಪಿಯು 50 ಸ್ಥಾನಗಳಲ್ಲಿ ಜಯಗಳಿಸಿತ್ತು.

ಇಬ್ಬರ ಪಕ್ಷೇತರ ಸದಸ್ಯರಲ್ಲೊಬ್ಬರಾದ ಪಟ್ಟೂರ್ ರಾಧಾಕೃಷ್ಣನ್ ಅವರ ಬೆಂಬಲವನ್ನು ಪಡೆಯುವುದರಲ್ಲಿ ಯಶಸ್ವಿಯಾದ ಬಿಜೆಪಿಯು ಸರಳ ಬಹುಮತದ ಮೂಲಕ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಂಡಿತು.

ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಎಂ ನೇತೃತ್ವದ ಯುಡಿಎಫ್ ಕ್ರಮವಾಗಿ 29 ಮತ್ತು 19 ಸ್ಥಾನಗಳಲ್ಲಿ ಜಯಗಳಿಸಿದ್ದರು. ಈ ಹಿಂದೆ ಕಾಂಗ್ರೆಸ್‌ನ ವಶದಲ್ಲಿದ್ದ ವಿಳಿಂಜಮ್ ವಾರ್ಡ್‌ನ ಚುನಾವಣೆಉ ಪಕ್ಷೇತರ ಅಭ್ಯರ್ಥಿಯೊಬ್ಬರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು.

ನೂತನ ಮೇಯರ್ ಆಗಿ ಆಯ್ಕೆಯಾಗಿರುವ 49 ವರ್ಷದ ರಾಜೇಶ್ ಅವರು ನಗರಪಾಲಿಕೆಯ ಸದಸ್ಯರಾಗಿ ಚುನಾಯಿತರಾಗಿರುವುದು ಇದು ಎರಡನೇ ಸಲವಾಗಿದೆ. ಅವರು ಕೊಡಂಗನೂರ್ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಆಯ್ಕೆಯಾಗಿರುವ ಆಶಾನಾಥ್ ಅವರು ಕರುಮಾಮ್ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ನೂತನ ಮೇಯರ್ ಹಾಗೂ ಉಪಮೇಯರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ ಸುರೇಶ್ ಗೋಪಿ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಸಿ.ಕೆ. ಪದ್ಮನಾಭನ್ ಹಾಗೂ ಸಿಪಿಎಂನ ಮಾಜಿ ಸಚಿವ ಹಾಗೂ ಶಾಸಕ ಕಡಕಂಪಳ್ಳಿ ಸುರೇಂದ್ರನ್ ಉಪಸ್ಥಿತರಿದ್ದರು. ನೂತನ ಮೇಯರ್ ಆಗಿ ಆಯ್ಕೆಯಾದ ರಾಜೇಶ್ ಅವರಿಗೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News