ಕೋಲ್ಕತಾ| ಸಿಲಿಗುರಿಯಲ್ಲಿ ಬಾಂಗ್ಲಾದೇಶದ ಪ್ರವಾಸಿಗರಿಗೆ ನಿಷೇಧ ವಿಧಿಸಿದ ಹೊಟೇಲ್ ಮಾಲಕರ ಸಂಘ
ಸಾಂದರ್ಭಿಕ ಚಿತ್ರ | Photo Credit : freepik.com
ಕೋಲ್ಕತಾ, ಡಿ. 26: ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬ್ದತೆ ಹಿನ್ನೆಲೆಯಲ್ಲೆ ಪಶ್ಚಿಮಬಂಗಾಳದ ಹೊಟೇಲ್ ಮಾಲಕರ ಸಂಘ ಸಿಲಿಗುರಿಯ ಸುತ್ತಮುತ್ತ ಬಾಂಗ್ಲಾದೇಶದ ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದೆ.
ಗ್ರೇಟರ್ ಸಿಲಿಗುರಿ ಹೊಟೇಲ್ ಮಾಲಕರ ಕಲ್ಯಾಣ ಸಂಘ ಇತ್ತೀಚೆಗೆ ಹೊರಡಿಸಿದ ನೋಟಿಸ್ ಪ್ರಕಾರ, ಈ ನಿರ್ಧಾರ ಕೆಲವು ಘಟನೆಗಳಿಗೆ ಸಂಬಂಧಿಸಿದೆ. ಈ ಘಟನೆಗಳು ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದೆ. ಈ ಘಟನೆಗಳಲ್ಲಿ ಭಾರತದ ಧ್ವಜಕ್ಕೆ ಅವಮಾನ ಮಾಡಿರುವುದು ಹಾಗೂ ಬಾಂಗ್ಲಾದೇಶದ ಒಂದು ವರ್ಗದ ಪ್ರಜೆಗಳು ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಕೂಡ ಸೇರಿದೆ.
ಪ್ರಸಕ್ತ ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅತಿಥಿಗಳು ಹಾಗೂ ಹೊಟೇಲ್ ಸಿಬ್ಬಂದಿಯ ಸುರಕ್ಷೆಯ ಉದ್ದೇಶವನ್ನು ಈ ನಿರ್ಧಾರ ಹೊಂದಿದೆ ಎಂದು ಹೊಟೇಲ್ ಮಾಲಕರ ಸಂಘ ತಿಳಿಸಿದೆ.
ಮುಂದಿನ ನೋಟಿಸಿನವರೆಗೆ ಸಂಘದ ಸದಸ್ಯರು ಬಾಂಗ್ಲಾದೇಶಿ ಪ್ರವಾಸಿಗರಿಗೆ ವಸತಿ ನೀಡುವುದಿಲ್ಲ ಎಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.