ಕಾಶ್ಮೀರಿ ಪಂಡಿತರು, ಮುಸ್ಲಿಮೇತರ ವಲಸೆ ಕಾರ್ಮಿಕರ ಮೇಲೆ ದಾಳಿಗೆ ಟಿಆರ್‌ಎಫ್ ಯೋಜನೆ: ಗುಪ್ತಚರ ಸಂಸ್ಥೆ
PC : PTI
ಹೊಸದಿಲ್ಲಿ: ಲಷ್ಕರೆ ತಯ್ಯಿಬದ ಅಂಗ ಸಂಸ್ಥೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಜಮ್ಮು ಹಾಗೂ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಮೇತರ ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿ ಹೊಸ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಸಿದೆ.
ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭದ್ರತೆ ಹೆಚ್ಚಿಸಿರುವ ನಡುವೆ ಸ್ಥಳೀಯ ಭಯೋತ್ಪಾದಕರ ಮನೆಗಳ ನೆಲಸಮ ಸೇರಿದಂತೆ ಅವರ ವಿರುದ್ಧದ ಕ್ರಮಗಳನ್ನು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಟಿಆರ್‌ಎಫ್ ಈ ಎಚ್ಚರಿಕೆ ನೀಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಆಡಳಿತ ಭಯೋತ್ಪಾದಕರಿಗೆ ಸೇರಿದ 9 ಮನೆಗಳನ್ನು ನೆಲಸಮಗೊಳಿಸಿದ ಬಳಿಕ ಟಿಆರ್‌ಎಫ್ ಪ್ರತೀಕಾರಕ್ಕೆ ಪ್ರಯತ್ನಿಸುತ್ತಿದೆ. ಈ ಗುಂಪಿನಲ್ಲಿ ವಿದೇಶಿ ಭಯೋತ್ಪಾದಕರು ಇದ್ದಾರೆ. ಇವರು ಅಪಘಾನಿಸ್ಥಾನದಲ್ಲಿದ್ದವರು. ಪಾಕಿಸ್ತಾನ ಮೂಲದ ನಿರ್ವಾಹಕರು ಇವರನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ಅತಿಸೂಕ್ಷ್ಮ ವಲಯಗಳಲ್ಲಿ ತ್ವರಿತ ಸ್ಪಂದನಾ ತಂಡಗಳು ಸೇರಿದಂತೆ ನಿಯೋಜನೆಯನ್ನು ಹೆಚ್ಚಿಸಿದೆ. ಅಲ್ಲದೆ, ರಸ್ತೆ ತೆರವು ತಂಡಗಳ ಕಾರ್ಯಾಚರಣೆ ಹಾಗೂ ಚೆಕ್ ಪಾಯಿಂಟ್ ಕರ್ತವ್ಯಗಳ ವೇಳೆ ಹೆಚ್ಚಿನ ನಿಗಾ ಇರಿಸಲಾಗಿದೆ. ಕರ್ತವ್ಯದ ವೇಳೆ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
ಪ್ರಮುಖ ಸ್ಥಾಪನೆಗಳು ಹಾಗೂ ಸಂಭಾವ್ಯ ಗುರಿಗಳ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಾಮಾನ್ಯ ಚಲನವಲವನ್ನು ತಡೆಯಲು ಹಾಗೂ ವಿಚಕ್ಷಣೆ ಹೆಚ್ಚಿಸಲು ಎಲ್ಲಾ ಪೊಲೀಸ್, ಸೇನೆ ಹಾಗೂ ಅರೆ ಸೇನಾ ಪಡೆಯ ಘಟಕಕ್ಕೆ ನಿರ್ದೇಶಿಸಲಾಗಿದೆ.