ತಹಸೀಲ್ದಾರರ ಕಾಲಿಗೆ ಬಿದ್ದು ನ್ಯಾಯಕ್ಕೆ ಮೊರೆ ಇಟ್ಟ ಆದಿವಾಸಿ ಮಹಿಳೆಯರು!
Photo Credit : NDTV
ಭೋಪಾಲ್: ಮಧ್ಯಪ್ರದೇಶದಲ್ಲಿ ಭೂಗಳ್ಳರಿಂದ ನ್ಯಾಯ ಒದಗಿಸುವಂತೆ ಮೊರೆ ಇಟ್ಟು ಆದಿವಾಸಿ ಮಹಿಳೆಯರಿಬ್ಬರು ಸ್ಥಳೀಯ ತಹಸೀಲ್ದಾರರ ಕಾಲಿಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ.
ಶಿವಪುರದ ಕರ್ಹಾಲ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಪ್ರಬಲರು ಮತ್ತು ಭೂಮಾಫಿಯಾ ವಶಪಡಿಸಿಕೊಂಡಿರುವ ತಮ್ಮ ಪೂರ್ವಜರ ಆಸ್ತಿಯನ್ನು ಮತ್ತೆ ತಮಗೆ ಮರಳಿಸುವಂತೆ ಮನವಿ ಮಾಡಿಕೊಂಡ ಈ ಇಬ್ಬರು ಮಹಿಳೆಯರು ತಹಶೀಲ್ದಾರರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಖಿರ್ಖಿರಿ ಗ್ರಾಮದ ಸಾವಿತ್ರಿಬಾಯಿ ಎಂಬ ಮಹಿಳೆ ತನ್ನ ಸೊಸೆಯೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಜಮೀನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೊಂದು ಮನವಿ ಸಲ್ಲಿಸಿದರು. ತಹಸೀಲ್ದಾರ್ ರೋಶ್ನಿ ಶೇಕ್ ತಮ್ಮ ಕಚೇರಿಯಿಂದ ಹೊರ ಹೋಗಲು ಮುಂದಾದಾಗ, ಹತಾಶೆಯಿಂದ ಮೆಟ್ಟಿಲಲ್ಲೇ ಅವರ ಪಾದ ಹಿಡಿದುಕೊಂಡು ಕಣ್ಣೀರಿಟ್ಟರು.
ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಸಾವಿತ್ರಿಬಾಯಿ ಕೋರಿದ್ದು, ಏನಾದರೂ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮಹಿಳೆ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರಭಾವಿ ವ್ಯಕ್ತಿಗಳು ತನ್ನ ಗುಡಿಸಲು ಕೆಡವಿ ಹಲವು ವರ್ಷಗಳಿಂದ ತಮ್ಮ ಕುಟುಂಬ ವಾಸಿಸುತ್ತಿದ್ದ ಜಾಗವನ್ನು ಬಲವಂತವಾಗಿ ಜಮೀನನ್ನು ಅತಿಕ್ರಮಿಸಿಕೊಂಡಿದ್ದಾರೆ. ಅದರಲ್ಲಿ ಹೊಸ ಕಟ್ಟಡಗಳನ್ನೂ ಕಟ್ಟಿದ್ದಾಗಿ ಮಹಿಳೆ ದೂರಿದ್ದಾರೆ. ಪೊಲೀಸ್ ಠಾಣೆ ಹಾಗೂ ತಹಸೀಲ್ದಾರರ ಕಚೇರಿಯಲ್ಲಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಮಹಿಳೆ ಆರೋಪಿಸಿದ್ದಾರೆ.