×
Ad

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ನಿಂದನೆ ಪ್ರಕ್ರಿಯೆ ಆರಂಭ

ವಿಚಾರಣೆ ಆರಂಭಿಸಲು ಅನುಮತಿ ಕೋರಿ ಅಟಾರ್ನಿ ಜನರಲ್‌ಗೆ ಪತ್ರ

Update: 2025-10-08 14:51 IST

ವಕೀಲ ರಾಕೇಶ್ ಕಿಶೋರ್ (Photo: ANI)

ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಶೂ ಎಸೆಯಲು ಯತ್ನಿಸಿದ ಅಮಾನತುಗೊಂಡ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ.

ಈ ಕುರಿತು ವಿಚಾರಣೆ ಪ್ರಾರಂಭಿಸಲು ಅನುಮತಿ ನೀಡುವಂತೆ ಅಟಾರ್ನಿ ಜನರಲ್‌ ರಿಗೆ ಅಧಿಕೃತ ಪತ್ರ ಕಳುಹಿಸಲಾಗಿದೆ.

ಸೋಮವಾರ ನಡೆದ ಘಟನೆ ವೇಳೆ 71 ವರ್ಷದ ಕಿಶೋರ್ ನನ್ನು ಕೋರ್ಟ್‌ ನ ಭದ್ರತಾ ಸಿಬ್ಬಂದಿ ತಕ್ಷಣವೇ ತಡೆದರು. ಬಳಿಕ ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಾತ್ಕಾಲಿಕವಾಗಿ ಆತನನ್ನು ಅಮಾನತುಗೊಳಿಸಿತು.

ಘಟನೆಯ ನಂತರ ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ ಕಿಶೋರ್, “ನನ್ನ ವರ್ತನೆ ಕೋಪದಿಂದಲ್ಲ, ಭಾವನಾತ್ಮಕ ನೋವಿನಿಂದ ಆಗಿದೆ. ಹಿಂದೂ ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ನಡೆಯುತ್ತಿರುವುದರಿಂದ ನನ್ನ ಮನಸ್ಸು ನೋವಿನಿಂದ ತುಂಬಿತ್ತು. ನಾನು ಮಾಡಿದದ್ದಕ್ಕೆ ಯಾವುದೇ ವಿಷಾದವಿಲ್ಲ,” ಎಂದು ಹೇಳಿಕೆ ನೀಡಿದ್ದನು.

ಸೆಪ್ಟೆಂಬರ್ 16ರಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಸಿಜೆಐ ಗವಾಯಿ ಮಾಡಿದ ಟೀಕೆ ನನಗೆ ನೋವುಂಟುಮಾಡಿದೆ ಎಂದು ವಕೀಲ ಕಿಶೋರ್ ಆರೋಪಿಸಿದ್ದಾನೆ. “ನ್ಯಾಯಮೂರ್ತಿಗಳು ‘ವಿಗ್ರಹಕ್ಕೆ ಪ್ರಾರ್ಥಿಸಿ, ವಿಗ್ರಹವೇ ತನ್ನ ತಲೆಯನ್ನು ಪುನಃಸ್ಥಾಪಿಸಲಿ’ ಎಂದು ಹೇಳಿದಾಗ ನನಗೆ ಅವಮಾನವಾದ ಅನುಭವವಾಯಿತು,” ಎಂದು ಆತ ಹೇಳಿದ್ದಾನೆ.

ನಾನು ಹಿಂಸಾಚಾರವನ್ನು ಸಂಪೂರ್ಣವಾಗಿ ವಿರೋಧಿಸುವ ಅಹಿಂಸಾತ್ಮಕ ವ್ಯಕ್ತಿ ಎಂದು ಕಿಶೋರ್ ಈ ವೇಳೆ ಹೇಳಿದ್ದಾನೆ.

“ನನಗೆ ಯಾವುದೇ ರಾಜಕೀಯ ಸಂಪರ್ಕವಿಲ್ಲ, ಕ್ರಿಮಿನಲ್ ಹಿನ್ನೆಲೆ ಕೂಡ ಇಲ್ಲ. ಆದರೆ ಹಿಂದೂ ಆಚರಣೆಗಳ ಮೇಲಿನ ನಿರಂತರ ನ್ಯಾಯಾಂಗ ಹಸ್ತಕ್ಷೇಪ ನನ್ನಂತಹ ವ್ಯಕ್ತಿಗೆ ಅಸಹ್ಯವಾಗಿತ್ತು,” ಎಂದು ಆತ ಹೇಳಿದ್ದಾನೆ.

ನ್ಯಾಯಾಂಗವು ವಿಭಿನ್ನ ಸಮುದಾಯಗಳ ಕುರಿತಂತೆ ವಿಭಿನ್ನ ದೃಷ್ಟಿಕೋನ ತೋರಿಸುತ್ತಿದೆ ಎಂದು ಇದೇ ವೇಳೆ ಆರೋಪಿ ವಕೀಲ ಟೀಕಿಸಿದ್ದಾನೆ.

“ಹಲ್ದ್ವಾನಿ ಅತಿಕ್ರಮಣ ಪ್ರಕರಣದಲ್ಲಿ ತಡೆಯಾಜ್ಞೆ ವಿಧಿಸಿದ ಕೋರ್ಟ್, ಜಲ್ಲಿಕಟ್ಟು ಮತ್ತು ದಹಿ ಹಂಡಿ ಮುಂತಾದ ಸನಾತನ ಆಚರಣೆಗಳ ವಿಷಯದಲ್ಲಿ ಬೇರೆ ರೀತಿಯ ಆದೇಶ ನೀಡುತ್ತಿದೆ,” ಎಂದು ಕಿಶೋರ್ ಆರೋಪಿಸಿದ್ದಾನೆ.

ಮಾರಿಷಸ್ ಭೇಟಿಯ ವೇಳೆ ಸಿಜೆಐ ಗವಾಯಿ ನೀಡಿದ ಹೇಳಿಕೆಗಳಿಗೂ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ. “ಅವರು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವುದರಿಂದ ಪದಗಳ ಘನತೆಯನ್ನು ಅರಿತು ನಡೆದುಕೊಳ್ಳಬೇಕಾಗಿದೆ,” ಎಂದು ವಕೀಲ ಹೇಳಿದ್ದಾನೆ.

ಈ ಘಟನೆಗೆ ದೇಶದ ರಾಜಕೀಯ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸುಧಾಂಶು ತ್ರಿವೇದಿ, “ಈ ಘಟನೆ ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ನೋಯಿಸಿದೆ. ಇದು ನಮ್ಮ ಸಂವಿಧಾನ ಮತ್ತು ಸಾಂಸ್ಕೃತಿಕ ಮೌಲ್ಯಗಳ ವಿರುದ್ಧದ ಕೃತ್ಯ,” ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ತ್ರಿವೇದಿ, “ಸಿಜೆಐ ಗವಾಯಿ ತೋರಿಸಿದ ಶಾಂತತೆ ಮತ್ತು ತಾಳ್ಮೆ ಸಾಂವಿಧಾನಿಕ ವ್ಯವಸ್ಥೆಯ ಮೇಲಿನ ಅವರ ಅಚಲ ನಂಬಿಕೆಯನ್ನು ತೋರಿಸುತ್ತದೆ,” ಎಂದು ಶ್ಲಾಘಿಸಿದ್ದಾರೆ.

ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಎನ್‌ಸಿಪಿ(ಎಸ್‌ಪಿ), ಶಿವಸೇನೆ (ಯುಬಿಟಿ), ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಕೂಡ ಈ ಘಟನೆಯನ್ನು “ಸಂವಿಧಾನದ ಮೇಲಿನ ದಾಳಿ” ಮತ್ತು “ದ್ವೇಷ ಹಾಗೂ ಮತಾಂಧತೆ ಹೆಚ್ಚುತ್ತಿರುವ ಅಪಾಯಕಾರಿ ಬೆಳವಣಿಗೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಇದು ನ್ಯಾಯಾಂಗ ಮತ್ತು ಸಂವಿಧಾನದ ಘನತೆಯ ಮೇಲಿನ ನೇರ ದಾಳಿ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂತಹ ಘಟನೆಗಳು ನಮ್ಮನ್ನು ಕೆಳಕ್ಕೆ ಕೊಂಡಯುತ್ತವೆ” ಎಂದು ವಿಪಕ್ಷಗಳು ಖಂಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News