×
Ad

ಅಮೆರಿಕದಿಂದ ಎಲ್‌ಪಿಜಿ ಆಮದು; ಬದಲಾಗಲಿದೆ ಅಡುಗೆ ಅನಿಲ ಸಬ್ಸಿಡಿ ಸೂತ್ರ!

ಅಡುಗೆ ಅನಿಲ ಪೂರೈಸುವ ಕಂಪೆನಿಗಳಿಗೆ ಹೊರೆಯಾಗಲಿದೆ ಹೊಸ ಒಪ್ಪಂದ

Update: 2025-12-30 20:10 IST

ಸಾಂದರ್ಭಿಕ ಚಿತ್ರ | Photo Credit : PTI 

ಚೆನ್ನೈ,ಡಿ.30: ಅಮೆರಿಕದಿಂದ ಹೆಚ್ಚಿನ ವೆಚ್ಚದಲ್ಲಿ ಆಮದು ಭಾರತದ ಎಲ್‌ಪಿಜಿ ಪೂರೈಕೆ ಸರಪಳಿಯ ಆರ್ಥಿಕತೆಯನ್ನು ಬದಲಿಸಲಿದೆ. ಹೀಗಾಗಿ ಸರಕಾರವು ದೇಶಿಯ ಅಡಿಗೆ ಅನಿಲದ ಮೇಲಿನ ಸಬ್ಸಿಡಿಗಳ ಲೆಕ್ಕಾಚಾರಕ್ಕೆ ಬಳಸುವ ಸೂತ್ರದ ಪರಿಷ್ಕರಣೆಯ ಬಗ್ಗೆ ಪರಿಶೀಲಿಸುತ್ತಿದೆ.

ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಈಗಾಗಲೇ ಅಮೆರಿಕದಿಂದ ಎಲ್‌ಪಿಜಿ ಖರೀದಿಗಾಗಿ ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಸಾಂಪ್ರದಾಯಿಕವಾಗಿ ಭಾರತದ ಎಲ್‌ಪಿಜಿ ಆಮದುಗಳ ಮೇಲೆ ಪ್ರಾಬಲ್ಯವನ್ನು ಹೊಂದಿರುವ ಮಧ್ಯಪ್ರಾಚ್ಯದಿಂದ ಹೊರಳುವಿಕೆಯನ್ನು ಸೂಚಿಸುತ್ತದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.

ಪ್ರಸ್ತುತ ದೇಶಿಯ ಎಲ್‌ಪಿಜಿ ಮೇಲೆ ಪಾವತಿಸುವ ಸಬ್ಸಿಡಿಯನ್ನು ಕೊಲ್ಲಿ ಪ್ರದೇಶದಿಂದ ಪೂರೈಕೆ ವೆಚ್ಚವನ್ನು ಪ್ರತಿಬಿಂಬಿಸುವ ದೀರ್ಘಕಾಲಿಕ ಜಾಗತಿಕ ಮಾನದಂಡವಾಗಿರುವ ಸೌದಿ ಒಪ್ಪಂದದ ಬೆಲೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಭಾರತದ ಹೆಚ್ಚಿನ ಆಮದುಗಳು ಪಶ್ಚಿಮ ಏಶ್ಯಾದಿಂದ ಬರುತ್ತಿದ್ದಾಗ ಹಾಗೂ ಸಾಗಾಣಿಕೆ ವೆಚ್ಚಗಳು ತುಲನಾತ್ಮಕವಾಗಿ ಸ್ಥಿರ ಮತ್ತು ಕಡಿಮೆ ಇದ್ದಾಗ ಈ ಮಾನದಂಡವು ಸಾಕಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.

ಆದರೆ ಅಮೆರಿಕದ ಎಲ್‌ಪಿಜಿ ಬೆಲೆಯನ್ನು ವಿಭಿನ್ನ ಮಾನದಂಡದ ಮೇಲೆ ನಿಗದಿಗೊಳಿಸಲಾಗಿದೆ ಮತ್ತು ಸುದೀರ್ಘ ಸಾಗಾಣಿಕೆ ಮಾರ್ಗವನ್ನು ಒಳಗೊಂಡಿದೆ. ಪರಿಣಾಮವಾಗಿ ಸಾಗಾಣಿಕೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಹೆಚ್ಚಾಗುತ್ತವೆ. ಸೌದಿ ಒಪ್ಪಂದ ಬೆಲೆಯನ್ನೇ ನೆಚ್ಚಿಕೊಳ್ಳುವುದನ್ನು ಮುಂದುವರಿಸಿದರೆ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್‌ಪಿಜಿಯ ನಿಜವಾದ ಆಮದು ಬೆಲೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಉದ್ಯಮದ ಹಿರಿಯ ಅಧಿಕಾರಿಗಳು ವಾದಿಸಿದ್ದಾರೆ.

ಹೊಸ ಪೂರೈಕೆ ವ್ಯವಸ್ಥೆಗಳಡಿ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ 2026ರ ಆರಂಭದಿಂದ ಅಮೆರಿಕದಿಂದ ಒಟ್ಟು ಸುಮಾರು 22 ಲಕ್ಷ ಟನ್ ಎಲ್‌ಪಿಜಿಯನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲಿವೆ. ಇದು ಭಾರತದ ಒಟ್ಟು ಎಲ್‌ಪಿಜಿ ಆಮದುಗಳ ಕೇವಲ ಶೇ.10ರಷ್ಟಿದ್ದರೂ ಅದು ತೈಲ ಮಾರಾಟ ಕಂಪನಿಗಳ ವೆಚ್ಚ ಸ್ವರೂಪದ ಮೇಲೆ, ವಿಶೇಷವಾಗಿ ಜಾಗತಿಕ ಬೆಲೆಗಳು ಅಸ್ಥಿರವಾಗಿರುವ ಅವಧಿಗಳಲ್ಲಿ,ಭೌತಿಕ ಪ್ರಭಾವವನ್ನು ಬೀರುತ್ತದೆ. ಅಧಿಕ ಸಾಗಾಣಿಕೆ ವೆಚ್ಚವನ್ನು ಸರಿದೂಗಿಸಲು ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಾದಾಗ ಮಾತ್ರ ಅಮೆರಿಕದಿಂದ ಎಲ್‌ಪಿಜಿ ಆಮದು ಮಿತವ್ಯಯಕಾರಿಯಾಗಿರುತ್ತದೆ.

ಆದರೆ ಈ ರಿಯಾಯಿತಿಗಳು ಯಾವಾಗಲೂ ಲಭ್ಯವಿರುವುದಿಲ್ಲ. ಬೆಲೆಗಳಲ್ಲಿ ಏರಿಕೆಯಾದಾಗ ಅಥವಾ ರಿಯಾಯತಿಗಳು ಕಡಿಮೆಯಾದಾಗ ಸಬ್ಸಿಡಿ ಲೆಕ್ಕಾಚಾರಕ್ಕಾಗಿ ಬಳಸುವ ಮಾನದಂಡ ಮತ್ತು ಕಂಪನಿಗಳು ನಿಜವಾಗಿ ಭರಿಸುವ ವೆಚ್ಚಗಳ ನಡುವಿನ ಅಂತರವು ಹೆಚ್ಚುತ್ತದೆ. ಇದು ಸರಕಾರಿ ಹಣಕಾಸುಗಳು ಮತ್ತು ತೈಲ ಮಾರಾಟ ಕಂಪನಿಗಳ ಆಯವ್ಯಯಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ದೇಶಿಯ ಎಲ್‌ಪಿಜಿ ಬೆಲೆಗಳು ರಾಜಕೀಯವಾಗಿ ಸೂಕ್ಷ್ಮವಾಗಿದ್ದು,ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಏರಿಳಿತಗಳ ಹೊರತಾಗಿಯೂ ವಿಸ್ತರಿತ ಅವಧಿಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಂಡಿಲ್ಲ. ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳನ್ನು ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದು ಅನಿವಾರ್ಯವಾದಾಗ ಅವು ನಷ್ಟವನ್ನು ಅನುಭವಿಸುತ್ತವೆ ಮತ್ತು ನಂತರ ಸರಕಾರವು ಬಜೆಟ್ ಬೆಂಬಲದ ಮೂಲಕ ಈ ನಷ್ಟವನ್ನು ತುಂಬಿಕೊಡುತ್ತದೆ.

ಆಮದುಗಳ ನಿಜವಾದ ವೆಚ್ಚವನ್ನು ಕೀಳಂದಾಜು ಮಾಡುವ ಸೂತ್ರವು ಈ ನಷ್ಟಗಳು ಹೆಚ್ಚುವ ಅಪಾಯವನ್ನುಂಟು ಮಾಡುತ್ತದೆ ಮತ್ತು ಅಂತಿಮವಾಗಿ ಸರಕಾರವು ತೈಲ ಮಾರಾಟ ಕಂಪನಿಗಳಿಗೆ ಭಾರೀ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿ ಸೂತ್ರದ ಪರಿಷ್ಕರಣೆಗೆ ಚರ್ಚೆಗಳು ನಡೆಯುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News