Uttar Pradesh | ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರು ಸೇವನೆ; 200ಕ್ಕೂ ಹೆಚ್ಚು ಮಂದಿಗೆ ರೇಬೀಸ್ ಲಸಿಕೆ
ಸಾಂದರ್ಭಿಕ ಚಿತ್ರ | Photo Credit : freepik.com
ಬುಡೌನ್ (ಉತ್ತರ ಪ್ರದೇಶ): ನಾಯಿ ಕಚ್ಚಿ ಮೃತಪಟ್ಟ ಎಮ್ಮೆಯ ಹಾಲಿನಿಂದ ತಯಾರಿಸಲಾದ ʼರಾಯಿತʼ (ಮೊಸರಿನಿಂದ ತಯಾರಿದ ಆಹಾರ) ಸೇವಿಸಿದ್ದ ಶಂಕೆಯ ಹಿನ್ನೆಲೆಯಲ್ಲಿ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ರೇಬೀಸ್ ನಿರೋಧಕ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.
ಡಿಸೆಂಬರ್ 23ರಂದು ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ ಸಮಾರಂಭದಲ್ಲಿ ʼರಾಯಿತʼ ವಿತರಿಸಲಾಗಿತ್ತು. ನಂತರ, ಆ ರಾಯಿತವನ್ನು ತಯಾರಿಸಲು ಬಳಸಿದ ಹಾಲು ಕೆಲವು ದಿನಗಳ ಹಿಂದೆ ನಾಯಿಯಿಂದ ಕಡಿತಕ್ಕೊಳಗಾಗಿದ್ದ ಎಮ್ಮೆಯಿಂದ ಬಂದದ್ದು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಎಮ್ಮೆ ಡಿಸೆಂಬರ್ 26ರಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೋಂಕಿನ ಭೀತಿ ವ್ಯಾಪಿಸಿತು.
ಭಯಭೀತರಾದ ಗ್ರಾಮಸ್ಥರು ಉಜಾನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆಗಳನ್ನು ಪಡೆದುಕೊಂಡರು. ಈ ಕುರಿತು ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಮಾತನಾಡಿ, “ರೇಬಿಸ್ ಪೀಡಿತ ನಾಯಿ ಕಚ್ಚಿದ್ದ ಎಮ್ಮೆ ರೇಬೀಸ್ ಲಕ್ಷಣಗಳಿಂದ ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುನ್ನೆಚ್ಚರಿಕೆಯಾಗಿ ರಾಯಿತ ಸೇವಿಸಿದ ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದೆ,” ಎಂದರು.
“ಸಾಮಾನ್ಯವಾಗಿ ಹಾಲನ್ನು ಕುದಿಸಿದ ಬಳಿಕ ರೇಬೀಸ್ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೂ ಯಾವುದೇ ಸಂಭಾವ್ಯ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಲಸಿಕೆ ನೀಡಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಗ್ರಾಮದಲ್ಲಿ ಇದುವರೆಗೆ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಶನಿವಾರ ಹಾಗೂ ರವಿವಾರವೂ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿಟ್ಟು ಲಸಿಕೆ ಹಾಕಲಾಗಿದೆ. ವದಂತಿಗಳು ಮತ್ತು ಅನಗತ್ಯ ಭೀತಿ ಹರಡದಂತೆ ಗ್ರಾಮವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ