ವೈರಲ್ ವೀಡಿಯೊ ವಿವಾದ: ಲಲಿತ್ ಮೋದಿ ಕ್ಷಮೆಯಾಚನೆ
ಭಾರತ ಸರ್ಕಾರದ ಬಗ್ಗೆ ಅಪಾರ ಗೌರವವಿದೆ ಐಪಿಎಲ್ ನ ಮಾಜಿ ಅಧ್ಯಕ್ಷ
Photo credit: X/@jim_rydell
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವೀಡಿಯೊ ವಿಚಾರಕ್ಕೆ ಸಂಬಂಧಿಸಿ ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕ್ಷಮೆಯಾಚಿಸಿದ್ದಾರೆ. ಭಾರತ ಸರ್ಕಾರದ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಲಿತ್ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, “ಭಾರತದಲ್ಲಿ ಮತ್ತೆ ಇಂಟರ್ನೆಟ್ ಸ್ಥಗಿತಗೊಳಿಸೋಣ. ಹುಟ್ಟುಹಬ್ಬದ ಶುಭಾಶಯಗಳು, ನನ್ನ ಸ್ನೇಹಿತ #ವಿಜಯ್ ಮಲ್ಯ. ಲವ್ ಯು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಹಂಚಿಕೊಂಡಿದ್ದರು. ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರೊಂದಿಗೆ ಇರುವ ಸ್ನೇಹವನ್ನು ಉಲ್ಲೇಖಿಸುವಂತಿದ್ದ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.
ವಿವಾದದ ಬಳಿಕ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಲಲಿತ್ ಮೋದಿ, “ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ವಿಶೇಷವಾಗಿ ಭಾರತ ಸರ್ಕಾರಕ್ಕೆ ನಾನು ಅಪಾರ ಗೌರವ ನೀಡುತ್ತೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದನ್ನು ಈ ರೀತಿಯಲ್ಲಿ ಪ್ರದರ್ಶಿಸುವ ಉದ್ದೇಶ ನನ್ನದಾಗಿರಲಿಲ್ಲ” ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪರಾರಿಯಾದವರನ್ನು ಕಾನೂನಿನ ಮುಂದೆ ತರಲು ಅಗತ್ಯ ಕಾನೂನು ಕ್ರಮಗಳು ಮುಂದುವರಿದಿವೆ ಎಂದು ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ದೇಶದಿಂದ ಪರಾರಿಯಾದವರ ವಾಪಸಾತಿಗಾಗಿ ಸಂಬಂಧಿತ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂತಹ ಪ್ರಕರಣಗಳಲ್ಲಿ ಬಹು ಹಂತದ ಕಾನೂನು ಪ್ರಕ್ರಿಯೆಗಳು ಒಳಗೊಂಡಿರುತ್ತವೆ” ಎಂದು ಹೇಳಿದ್ದಾರೆ.
I apologise if I have hurt anyone feelings especially the Indian Government who I have the highest respect and regard for. The statement was misconstrued and was never intended to be as played out. Once again my deepest apologies
— Lalit Kumar Modi (@LalitKModi) December 29, 2025