ಉನ್ನಾವೋ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಜಾಮೀನಿಗೆ ಸುಪ್ರೀಂಕೋರ್ಟ್ ತಡೆ
ಕುಲದೀಪ್ ಸೆಂಗಾರ್ (File Photo: PTI)
ಹೊಸದಿಲ್ಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ನ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟಿನ ರಜಾ ಪೀಠವು, ಸೆಂಗಾರ್ ಗೆ ನೋಟಿಸ್ ಜಾರಿ ಮಾಡಿ, ಮುಂದಿನ ಆದೇಶದವರೆಗೆ ಅಪರಾಧಿಯನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ಪೀಠ, ಈ ಪ್ರಕರಣವು ‘ಕಾನೂನಿನ ಗಣನೀಯ ಪ್ರಶ್ನೆಗಳು’ ಹುಟ್ಟುಹಾಕಿದೆ ಎಂದು ಉಲ್ಲೇಖಿಸಿ , ವಿಚಾರಣೆಯನ್ನು ನಾಲ್ಕು ವಾರಗಳ ನಂತರಕ್ಕೆ ಮುಂದೂಡಿದೆ.
ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ಆದೇಶವನ್ನು ತಕ್ಷಣ ತಡೆಹಿಡಿಯುವಂತೆ ಪೀಠವನ್ನು ಮನವಿ ಮಾಡಿದರು. ಡಿ.23ರಂದು ನೀಡಲಾಗಿದ್ದ ಹೈಕೋರ್ಟ್ ಆದೇಶದ ಪರಿಣಾಮವಾಗಿ ಸೆಂಗಾರ್ ನನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಉಂಟಾಗಿದ್ದರೂ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಅದು ತಪ್ಪಿದೆ.
ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು, ಮೇಲ್ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ಅಪರಾಧಿ ಈಗಾಗಲೇ ಏಳು ವರ್ಷ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿರುವುದನ್ನು ಹೈಕೋರ್ಟ್ ಉಲ್ಲೇಖಿಸಿತ್ತು.
ಆದಾಗ್ಯೂ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗಾರ್ ಗೆ ವಿಧಿಸಲಾದ 10 ವರ್ಷಗಳ ಜೈಲು ಶಿಕ್ಷೆ ಪ್ರಕರಣದಲ್ಲಿ ಜಾಮೀನು ದೊರಕದ ಹಿನ್ನೆಲೆಯಲ್ಲಿ ಆತ ಜೈಲಿನಲ್ಲೇ ಮುಂದುವರಿಯಬೇಕಾಗುತ್ತದೆ.
ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ಸಂಬಂಧಿತ ಇತರ ಪ್ರಕರಣಗಳನ್ನು 2019ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶದ ನ್ಯಾಯಾಲಯದಿಂದ ದಿಲ್ಲಿಗೆ ವರ್ಗಾಯಿಸಲಾಗಿತ್ತು.