×
Ad

ಸಾಫ್ಟ್‌ವೇರ್ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರೂ ಎಸ್‌ಐಆರ್‌ಗಾಗಿ ಅದನ್ನೇ ಬಳಸಿದ ಚುನಾವಣಾ ಆಯೋಗ: ವರದಿ

Update: 2025-12-29 18:45 IST

 ಚುನಾವಣಾ ಆಯೋಗ , ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ: ಮತದಾರರ ಪಟ್ಟಿಗಳಲ್ಲಿಯ ನಕಲು ನಮೂದುಗಳನ್ನು ತೆಗೆದುಹಾಕುವ ಡಿ-ಡುಪ್ಲಿಕೇಷ್‌ನ್ ಸಾಫ್ಟ್‌ವೇರ್ ದೋಷಪೂರಿತವಾಗಿದೆ ಎಂದು ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ಚುನಾವಣಾ ಆಯೋಗವು 12 ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ನಡುವೆಯೇ ಅದನ್ನು ಮರುಬಳಕೆ ಮಾಡಿರುವುದನ್ನು The Reporters' Collective ನ ತನಿಖಾ ವರದಿಯು ಬಹಿರಂಗಗೊಳಿಸಿದೆ. ಚುನಾವಣಾ ಆಯೋಗದ ಈ ನಡೆಯು ಮತದಾರರ ಪಟ್ಟಿಗಳಿಂದ ಲಕ್ಷಾಂತರ ಮತದಾರರ ಹೆಸರುಗಳನ್ನು ತಪ್ಪಾಗಿ ತೆಗೆದುಹಾಕಿರುವ ಆತಂಕವನ್ನು ಸೃಷ್ಟಿಸಿದೆ.

ಸಾಫ್ಟ್‌ವೇರ್‌ನ ಮಾರ್ಗಸೂಚಿಯಲ್ಲಿ ಸೂಚಿಸಲಾದ ಕಠಿಣ ಪರಿಶೀಲನೆ ನಡೆಸದೆ ಚುನಾವಣಾ ಆಯೋಗವು ಅದನ್ನು ಬಳಸಿದೆ. ಈ ಅಲ್ಗರಿದಮಿಕ್ ಸಿಸ್ಟಮ್ ತಪ್ಪು ಫಲಿತಾಂಶಗಳನ್ನು ನೀಡಿದ್ದರಿಂದ 2023ರ ಬಳಿಕ ಅದನ್ನು ಬಳಸಿಲ್ಲ ಎಂದು ಚುನಾವಣಾ ಆಯೋಗವು ನ.24ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿಸಿತ್ತಾದರೂ ಅದನ್ನೇ ಮತ್ತೆ ಬಳಸಿದೆ.

ಮತದಾರರ ಪಟ್ಟಿಗಳಲ್ಲಿ ಡುಪ್ಲಿಕೇಟ್ ಹೆಸರುಗಳನ್ನು ಗುರುತಿಸಲು ವಿನ್ಯಾಸಗೊಂಡಿರುವ ಸಾಫ್ಟ್‌ವೇರ್‌ ಅನ್ನು ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಎಂಟು ದಿನಗಳಲ್ಲೇ ಎಸ್‌ಐಆರ್ ಸಂದರ್ಭದಲ್ಲಿ ಮರುಸಕ್ರಿಯಗೊಳಿಸಲಾಗಿತ್ತು ಎಂದು ವರದಿಯು ಆರೋಪಿಸಿದೆ.

ಲಿಖಿತ ಸೂಚನೆಗಳಿಲ್ಲದೆ, ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಅನುಸರಿಸದೆ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡದೆ ಸಾಫ್ಟ್‌ವೇರ್‌ ಅನ್ನು ಮರುಸಕ್ರಿಯಗೊಳಿಸಲಾಗಿತ್ತು ಎಂದು ತನಿಖಾ ವರದಿಯು ಬೆಟ್ಟು ಮಾಡಿದೆ.

ಚುನಾವಣಾ ಆಯೋಗವು ಈ ಹಿಂದೆ ಡುಪ್ಲಿಕೇಟ್ ಹೆಸರುಗಳನ್ನು ಅಳಿಸುವ ಮುನ್ನ ‘ಅರೆ-ನ್ಯಾಯಾಂಗ’ ವಿಚಾರಣೆ ಮತ್ತು ಕ್ಷೇತ್ರ ಪರಿಶೀಲನೆಯನ್ನು ಕಡ್ಡಾಯಗೊಳಿಸಿತ್ತು ,ಆದರೆ ನೂತನ ಪ್ರಕ್ರಿಯೆಯು ಈ ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿದೆ ಎನ್ನಲಾಗಿದೆ. ಸಂಹಿತೀಕೃತ ಕಾರ್ಯವಿಧಾನಗಳಿಲ್ಲದೆ ಡುಪ್ಲಿಕೇಟ್ ಹೆಸರುಗಳನ್ನು ಅಳಿಸುವ ಸ್ವಯಂ ನಿರ್ಧಾರ ಅಧಿಕಾರವನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿತ್ತು ಎನ್ನಲಾಗಿದೆ.

ಮತದಾರರ ಹೆಸರುಗಳನ್ನು 2002-2004ರ ಮತದಾರರ ಪಟ್ಟಿಗಳೊಂದಿಗೆ ಹೋಲಿಸಲು ಚು.ಆಯೋಗವು ಇನ್ನೊಂದು ಸಾಫ್ಟ್‌ವೇರ್‌ನ್ನು ಸಹ ಬಳಸಿದ್ದು,ಇದು ಮತದಾರರು ಮತ್ತು ಅವರ ಸಂಬಂಧಿಗಳ ನಡುವೆ ವಯಸ್ಸಿನ ಅಂತರಗಳಂತಹ ತಾರ್ಕಿಕ ವ್ಯತ್ಯಾಸಗಳನ್ನು ತೋರಿಸುತ್ತದೆ.

ದಶಕಗಳಷ್ಟು ಹಳೆಯ ಮತದಾರರ ಪಟ್ಟಿಗಳಿಗೆ ತಮ್ಮ ವಂಶಾವಳಿಯನ್ನು ಗುರುತಿಸಲು ಸಾಧ್ಯವಾಗದ ಮತದಾರರನ್ನು ‘ಅನ್‌ಮ್ಯಾಪ್ಡ್’ ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಎಸ್‌ಐಆರ್‌ನಲ್ಲಿ 86.46 ಲಕ್ಷ ಮತದಾರರನ್ನು ‘ಅನ್‌ಮ್ಯಾಪ್ಡ್ ’ ಎಂದು ಗುರುತಿಸಲಾಗಿದ್ದು,11 ರಾಜ್ಯಗಳಲ್ಲಿ 3.7 ಕೋಟಿ ಹೆಸರುಗಳನ್ನು ಕರಡು ಮತದಾರರ ಪಟ್ಟಿಗಳಿಂದ ತೆಗೆಯಲಾಗಿದೆ. ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಯು ಡಿ.31ರಂದು ಪ್ರಕಟಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News