×
Ad

ಉತ್ತರ ಪ್ರದೇಶ | ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ ಅವಘಡ ಪ್ರಕರಣ ; ಮತ್ತೆರೆಡು ಶಿಶುಗಳು ಮೃತ್ಯು

Update: 2024-11-24 21:56 IST

PC : PTI 

ಝಾನ್ಸಿ(ಉತ್ತರಪ್ರದೇಶ) : ಇಲ್ಲಿನ ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ರಕ್ಷಿಸಲಾಗಿದ್ದ ಶಿಶುಗಳಲ್ಲಿ ಮತ್ತೆರೆಡು ಶಿಶುಗಳು ಮೃತಪಟ್ಟಿವೆ. ಇದರೊಂದಿಗೆ ಈ ಬೆಂಕಿ ಅವಘಡದಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ನವೆಂಬರ್ 15ರಂದು ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ 39 ನವಜಾತ ಶಿಶುಗಳನ್ನು ರಕ್ಷಿಸಲಾಗಿತ್ತು.

ಬೆಂಕಿ ಅವಘಡದಲ್ಲಿ ರಕ್ಷಿಸಲಾಗಿದ್ದ 39 ಶಿಶುಗಳಲ್ಲಿ ಮತ್ತೆರೆಡು ಶಿಶುಗಳು ಮೃತಪಟ್ಟಿವೆ. 10 ಶಿಶುಗಳು ಬೆಂಕಿ ಅವಘಡ ಸಂಭವಿಸಿದ ರಾತ್ರಿಯೇ ಮೃತಪಟ್ಟಿದ್ದವು. ಉಳಿದ 5 ಶಿಶುಗಳು ಅನಂತರ ಅನಾರೋಗ್ಯದಿಂದ ಸಾವನ್ನಪ್ಪಿದ್ದವು ಎಂದು ವೈದ್ಯಕೀಯ ಕಾಲೇಜಿನ ಡಾ. ನರೇಂದ್ರ ಸಿಂಗ್ ಸೆಂಗಾರ್ ತಿಳಿಸಿದ್ದಾರೆ.

ಶಿಶುಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಗಿದೆ. ಈ ಎರಡೂ ಶಿಶುಗಳು ಅನಾರೋಗ್ಯದಿಂದ ಮೃತಪಟ್ಟಿವೆ ಎಂದು ದೃಢಪಟ್ಟಿದೆ. ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಸೆಂಗಾರ್ ತಿಳಿಸಿದ್ದಾರೆ.

ಈ ಶಿಶುಗಳ ಜನನ ಕಾಲದ ತೂಕ 800 ಗ್ರಾಂ. ಈ ಶಿಶುಗಳಲ್ಲಿ ಒಂದು ಶಿಶುವಿನ ಹೃದಯದಲ್ಲಿ ರಂಧ್ರವಿತ್ತು ಎಂದು ಅವರು ಹೇಳಿದ್ದಾರೆ.

ಈ ನಡುವೆ, ಕಾಂಗ್ರೆಸ್‌ನ ರಾಜ್ಯ ವರಿಷ್ಠ ಅಜಯ್ ರಾಯ್ ಹಾಗೂ ಬಾರಾಬಂಕಿ ಸಂಸದ ತನುಜ್ ಪುನಿಯಾ ಝಾನ್ಸಿಗೆ ತೆರಳಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News