×
Ad

ಉತ್ತರಾಖಂಡ | ಅತ್ಯಾಚಾರದಿಂದ ಪಾರಾಗಲು ರಾತ್ರಿಯಿಡೀ ಅರಣ್ಯದಲ್ಲಿ ಅವಿತುಕೊಂಡಿದ್ದ ಪ್ರವಾಸಿ ಮಹಿಳೆ

Update: 2026-03-08 20:39 IST

ಸಾಂದರ್ಭಿಕ ಚಿತ್ರ | Photo Credit : freepik

ನೈನಿತಾಲ್ (ಉತ್ತರಾಖಂಡ),ಮಾ.8: ಒಬ್ಬಂಟಿಯಾಗಿ ಪ್ರವಾಸ ಕೈಗೊಂಡಿದ್ದ ದಿಲ್ಲಿಯ ಮಹಿಳೆಯೊಬ್ಬರು ಭಯಾನಕ ರಾತ್ರಿಯನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರ ಪ್ರಯತ್ನದಿಂದ ಪಾರಾಗಲು ಅವರು ರಾತ್ರಿಯಿಡೀ ಇಲ್ಲಿಯ ಅರಣ್ಯದಲ್ಲಿ ಬಚ್ಚಿಟ್ಟುಕೊಂಡಿದ್ದು, ಗಾಯಗೊಂಡಿದ್ದ ಅವರ ಬಳಿ ಮೊಬೈಲ್ ಫೋನ್ ಸಹ ಇರಲಿಲ್ಲ.

ಗುರುವಾರ ದಿಲ್ಲಿಯಿಂದ ಡೆಹ್ರಾಡೂನ್ ಮೂಲಕ ಕಾಠಗೋದಾಮ್‌ಗೆ ತಲುಪಿದ್ದ 31ರ ಹರೆಯದ ಮಹಿಳೆ ನೈನಿತಾಲ್‌ಗಾಗಿ ಬಾಡಿಗೆ ಟ್ಯಾಕ್ಸಿಯನ್ನು ಪಡೆದಿದ್ದರು. ಮಾರ್ಗಮಧ್ಯೆ,ನಸುಕಿನ 1:30ರ ಸುಮಾರಿಗೆ ಟ್ಯಾಕ್ಸಿ ಚಾಲಕ ನೈನಿತಾಲ್ ಸಮೀಪದ ಪಟವಾ ಡಂಗರ್‌ನ ನಿರ್ಜನ ರಸ್ತೆಯತ್ತ ತಿರುಗಿಸಿದ್ದ.

ಮಹಿಳೆ ಆಕ್ಷೇಪಿಸಿದಾಗ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ ಹಲ್ಲೆಯನ್ನೂ ನಡೆಸಿದ್ದ. ಆತ ಆಕೆಯ ಮೊಬೈಲ್ ಫೋನ್‌ನ್ನೂ ಕಿತ್ತುಕೊಂಡಿದ್ದ ಮತ್ತು ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ ಎಂದು ಪೋಲಿಸರು ತಿಳಿಸಿದರು.

ತನ್ನನ್ನು ರಕ್ಷಿಸಿಕೊಳ್ಳಲು ಕಾಡಿನತ್ತ ಓಡಿದ್ದ ಮಹಿಳೆ ರಾತ್ರಿಯಿಡೀ ಅಲ್ಲಿಯೇ ಅಡಗಿಕೊಂಡಿದ್ದರು. ಹೇಗೋ ಶುಕ್ರವಾರ ಬೆಳಿಗ್ಗೆ ಪಟವಾ ಡಂಗರ್ ಗ್ರಾಮವನ್ನು ತಲುಪಿದ್ದ ಆಕೆ ಸ್ಥಳೀಯರ ನೆರವಿನಿಂದ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ತಕ್ಷಣ ಕಾರ್ಯಪ್ರವತ್ತರಾದ ಪೋಲಿಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳು,ಟ್ಯಾಕ್ಸಿ ನಂಬರ್ ಮತ್ತು ಅದರ ಜಿಪಿಎಸ್ ವ್ಯವಸ್ಥೆಯ ಮೂಲಕ ಪೋಲಿಸರು ಆರೋಪಿ ಚಾಲಕ ದೀಪಕ್ ಸಿಂಗ್ ಬೋರಾ (39)ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಹಲ್ದವಾನಿ ನಿವಾಸಿಯಾಗಿರುವ ಬೋರಾನಿಂದ ಮಹಿಳೆಯ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News