ಸರಕಾರದ ಉಪಕ್ರಮಗಳ ಮಾಹಿತಿ ನೀಡಲು ಪಿಐಬಿಯ ಸಂಶೋಧನ ಘಟಕದಿಂದ ವ್ಯಾಟ್ಸ್ ಆ್ಯಪ್ ಚಾನೆಲ್ ಆರಂಭ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಬಿಜೆಪಿ ಕೇಂದ್ರದಲ್ಲಿ 11 ವರ್ಷಗಳ ಆಡಳಿತವನ್ನು ಪೂರೈಸಿದ ಸಂದರ್ಭ ಪತ್ರಿಕಾ ಮಾಹಿತಿ ಬ್ಯುರೋ (ಪಿಐಬಿ)ದ ಸಂಶೋಧನಾ ಘಟಕ ಬುಧವಾರ ಮಹತ್ವದ ಹೆಜ್ಜೆ ಇರಿಸಿದೆ. ಸರಕಾರದ ಪ್ರಮುಖ ಉಪಕ್ರಮಗಳು, ಯೋಜನೆಗಳು, ನೀತಿಗಳು ಹಾಗೂ ಅಭಿವೃದ್ಧಿ ಮೈಲುಗಲ್ಲುಗಳ ಕುರಿತು ನಿಯಮಿತ ಮಾಹಿತಿ ಒದಗಿಸಲು ಅದು ವ್ಯಾಟ್ಸ್ ಆ್ಯಪ್ ಚಾನೆಲ್ ಆರಂಭಿಸಿದೆ.
ಇದುವರೆಗೆ ಈ ಘಟಕ ಸಾರ್ವಜನಿಕರಿಗೆ ನಿಖರ ಮತ್ತು ಸಕಾಲಿಕ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಲು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿತ್ತು. ಈಗ ವ್ಯಾಟ್ಸ್ ಆ್ಯಪ್ ಚಾನಲ್ ಮೂಲಕ ಬಹಿರಂಗವಾಗಿ ಕೆಲಸ ಮಾಡಲು ನಿರ್ಧರಿಸಿದೆ.
ಈ ಚಾನೆಲ್ ಸರಕಾರಿ ಕಾರ್ಯಕ್ರಮಗಳು ಹಾಗೂ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ಅಮೂಲ್ಯವಾದ ಸಂಪನ್ಮೂಲವಾಗಲಿದೆ ಎಂದು ಈ ವಿಷಯದ ಕುರಿತು ಮಾಹಿತಿ ಇರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ಭಾರತದ ಅಭಿವೃದ್ಧಿ ಯಾನದ ಬಗ್ಗೆ ಚೆನ್ನಾಗಿ ಸಂಶೋಧನೆ ಮಾಡಿದ ಹಾಗೂ ಪುರಾವೆ ಆಧಾರಿತ ಒಳನೋಟಗಳಿಗೆ ನಿಮ್ಮ ನಂಬಿಕಾರ್ಹ ಮೂಲ ಈ ವ್ಯಾಟ್ಸ್ ಆ್ಯಪ್ ಚಾನೆಲ್. ಸರಕಾರದ ಪ್ರಮುಖ ಯೋಜನೆಗಳು, ನೀತಿಗಳು ಹಾಗೂ ಅಭಿವೃದ್ಧಿ ಮೈಲುಗಲ್ಲುಗಳ ಕುರಿತು ನಿಯಮಿತ ಮಾಹಿತಿ ಸ್ವೀಕರಿಸಿ’ ಎಂದು ಪಿಐಬಿ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದೆ.