×
Ad

ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಿ.ಸುದರ್ಶನ್ ರೆಡ್ಡಿ ಯಾರು?

Update: 2025-08-19 15:12 IST

 ಬಿ.ಸುದರ್ಶನ ರೆಡ್ಡಿ (Photo:X/@sansad_tv)

ಹೊಸದಿಲ್ಲಿ: ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಹಾಗೂ ಗೋವಾದ ಪ್ರಥಮ ಲೋಕಾಯುಕ್ತ ಬಿ.ಸುದರ್ಶನ ರೆಡ್ಡಿಯವರನ್ನು ಸೆ.9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅವರು ಎನ್‌ಡಿಎ ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸಲಿದ್ದಾರೆ.

ಜು.8,1946ರಂದು ಆಗಿನ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ (ಈಗ ತೆಲಂಗಾಣದಲ್ಲಿದೆ) ಇಬ್ರಾಹಿಂಪಟ್ಣ ತಾಲೂಕಿನ(ಈಗಿನ ಕಂಡುಕುರ್ ಮಂಡಲ) ಅಕುಲ ಮೈಲಾರಂ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ್ದ ನ್ಯಾ. ರೆಡ್ಡಿ ಅವರು 1971ರಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ವಿವಿಯಿಂದ ಕಾನೂನು ಪದವಿಯನ್ನು ಪಡೆದಿದ್ದರು. ಅದೇ ವರ್ಷ ಆಂಧ್ರಪ್ರದೇಶ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು.

ನ್ಯಾ. ರೆಡ್ಡಿ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಕೆ. ಪ್ರತಾಪ ರೆಡ್ಡಿಯವರ ಮಾರ್ಗದರ್ಶನದಲ್ಲಿ ಸಿವಿಲ್ ಮತ್ತು ಸಾಂವಿಧಾನಿಕ ವಿಷಯಗಳನ್ನು ನಿರ್ವಹಿಸುವ ಮೂಲಕ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ಆ.8, 1988ರಂದು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿ ನೇಮಕಗೊಂಡ ಅವರು ಕಂದಾಯ ಇಲಾಖೆಯ ಉಸ್ತುವಾರಿ ಹೊಂದಿದ್ದು, ಜ.1990ರವರೆಗೆ ಸೇವೆಯಲ್ಲಿದ್ದರು. ಬಳಿಕ ಕೇಂದ್ರ ಸರಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಅಲ್ಪಾವಧಿಗೆ ಸೇವೆ ಸಲ್ಲಿಸಿದ್ದರು.

ತನ್ನ ವಕೀಲ ವೃತ್ತಿಯ ಜೊತೆಗೆ ನ್ಯಾ.ರೆಡ್ಡಿ ಅವರು ಎ.ವಿ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದು,ಜ.1993ರಿಂದ ಉಸ್ಮಾನಿಯಾ ವಿವಿಗೆ ಕಾನೂನು ಸಲಹೆಗಾರ ಮತ್ತು ಸ್ಥಾಯಿ ವಕೀಲರಾಗಿ ಕೆಲಸ ಮಾಡಿದ್ದರು. 1993-94ರಲ್ಲಿ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮೇ 2,1995ರಂದು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಅವರು ನಂತರ ಅದೇ ವರ್ಷ ಖಾಯಂ ನ್ಯಾಯಾಧೀಶರಾದರು. ತನ್ನ ಪ್ರತಿಭೆ ಮತ್ತು ಜ್ಯೇಷ್ಠತೆಯಿಂದಾಗಿ ಡಿ.5,2005ರಂದು ಗುವಾಹಟಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು.

ಜ.12,2007ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡ ಅವರು ಜು.8,2011ರಲ್ಲಿ ನಿವೃತ್ತಗೊಂಡರು.

ನಿವೃತ್ತಿಯ ಬಳಿಕ ಮಾ.2013ರಲ್ಲಿ ಗೋವಾದ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ಅವರು,ಅ.2013ರಲ್ಲಿ ವೈಯಕ್ತಿಕ ಕಾರಣಗಳು ಮತ್ತು ಸಾಂಸ್ಥಿಕ ಮಿತಿಗಳ ಕುರಿತು ಕಳವಳಗಳನ್ನು ಉಲ್ಲೇಖಿಸಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾ.ರೆಡ್ಡಿಯವರ ಅಧಿಕಾರಾವಧಿಯು ಹಲವಾರು ಪ್ರಮುಖ ತೀರ್ಪುಗಳಿಗಾಗಿ ಗಮನಾರ್ಹವಾಗಿದೆ.

ಕಪ್ಪು ಹಣ ಪ್ರಕರಣ(2011): ಸರಕಾರದ ನಿಷ್ಕ್ರಿಯತೆಯನ್ನು ಕಟುವಾಗಿ ಟೀಕಿಸಿದ್ದ ನ್ಯಾ.ರೆಡ್ಡಿ ವಿದೇಶಗಳಲ್ಲಿ ಸಂಗ್ರಹಗೊಂಡಿರುವ ಕಪ್ಪು ಹಣದ ತನಿಖೆಗಾಗಿ ವಿಶೇಷ ತನಿಖಾ ತಂಡದ ರಚನೆಗೆ ಆದೇಶಿಸಿದ್ದರು.

ಸಲ್ವಾ ಜುಡುಂ ಪ್ರಕರಣ(2011): ಛತ್ತೀಸಗಡ ಸರಕಾರದಿಂದ ‘ವಿಶೇಷ ಪೋಲಿಸ್ ಅಧಿಕಾರಿಗ’ಳಾಗಿ ಸಶಸ್ತ್ರ ಬುಡಕಟ್ಟು ಯುವಜನರ ಬಳಕೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ ನ್ಯಾ.ರೆಡ್ಡಿ,ಅದನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದ್ದರು.

ಅಂಬಾನಿ ಅನಿಲ ವಿವಾದ(2010): ನೈಸರ್ಗಿಕ ಅನಿಲವು ಸರಕಾರದ ನಿಯಂತ್ರಣದಡಿ ರಾಷ್ಟ್ರೀಯ ಸಂಪತ್ತಾಗಿದ್ದು, ಖಾಸಗಿ ಒಪ್ಪಂದಗಳಿಗೆ ಅವಕಾಶವಿಲ್ಲ ಎಂದು ತೀರ್ಪು ನೀಡಿದ್ದ ಸಂವಿಧಾನ ಪೀಠದ ಸದಸ್ಯರಾಗಿದ್ದರು.

ತನ್ನ ನ್ಯಾಯಾಂಗ ಮತ್ತು ವೃತ್ತಿ ಜೀವನದುದ್ದಕ್ಕೂ ಸ್ವತಂತ್ರ ಮನೋಭಾವದ ನ್ಯಾಯಶಾಸ್ತ್ರಜ್ಞ ಎಂಬ ಗೌರವಕ್ಕೆ ಪಾತ್ರರಾಗಿದ್ದ ನ್ಯಾ.ರೆಡ್ಡಿ ತನ್ನ ಪ್ರಾಮಾಣಿಕತೆ,ಸಾಂವಿಧಾನಿಕ ದೃಷ್ಟಿಕೋನಕ್ಕಾಗಿ ಮತ್ತು ಸರಕಾರದ ಉತ್ತರದಾಯಿತ್ವಕ್ಕೆ ಒತ್ತು ನೀಡುವಿಕೆಗೆ ಹೆಸರಾಗಿದ್ದರು. ಅಭ್ಯರ್ಥಿಯಾಗಿ ಅವರ ನಾಮಕರಣವನ್ನು ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಶ್ವಾಸಾರ್ಹತೆ ಮತ್ತು ಋಜುತ್ವವನ್ನು ಬಿಂಬಿಸಲು ಪ್ರತಿಪಕ್ಷದ ಪ್ರಯತ್ನವಾಗಿದೆ ಎಂದು ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News