×
Ad

ʼಪೆಗಾಸಸ್ ಸ್ಪೈವೇರ್ʼ ಪ್ರಕರಣದಲ್ಲಿ ಸರಕಾರವನ್ನು ಪ್ರಶ್ನಿಸಿ ಸುದ್ದಿಯಾಗಿದ್ದ ನೂತನ ಸಿಜೆಐ ಸೂರ್ಯಕಾಂತ್‌ ಯಾರು?

49ನೇ ವಯಸ್ಸಿಗೆ ಕಾನೂನಿನಲ್ಲಿ ಸ್ನಾತಕೋತ್ತರ ಪಡೆದಿದ್ದ ನೂತನ ಸಿಜೆಐ!

Update: 2025-11-24 20:28 IST

ನ್ಯಾಯಮೂರ್ತಿ ಸೂರ್ಯಕಾಂತ್‌ | PC : PTI 

ಹೊಸದಿಲ್ಲಿ,ನ.24: ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಸೋಮವಾರ ಭಾರತದ 53ನೇ ಮುಖ್ಯ ನ್ಯಾಯಾಧೀಶರಾಗಿ (ಸಿಜೆಐ) ಪ್ರಮಾಣ ವಚನವನ್ನು ಸ್ವೀಕರಿಸಿದರು. ನ್ಯಾ.ಸೂರ್ಯಕಾಂತ್‌ ಅವರು ಸುಮಾರು 15 ತಿಂಗಳುಗಳ ಕಾಲ ಸಿಜೆಐ ಹುದ್ದೆಯಲ್ಲಿರುತ್ತಾರೆ. ಫೆಬ್ರವರಿ 9,2027ರಂದು 65 ವರ್ಷಗಳಾಗುತ್ತಿದ್ದಂತೆ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಸಿಜೆಐ ಆಗಿ ತನ್ನ ಅಧಿಕಾರಾವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ 90,000 ಪ್ರಕರಣಗಳನ್ನು ‘ನಿರ್ವಹಿಸಬಹುದಾದ’ ಸಂಖ್ಯೆಗೆ ಇಳಿಸುವುದು ತನ್ನ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದಾಗಿರಲಿದೆ ಎಂದು ನ್ಯಾ.ಸೂರ್ಯಕಾಂತ್‌ ನ.22, 2025ರಂದು ಹೇಳಿದ್ದರು.

ಫೆ.10.1962ರಂದು ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಸೂರ್ಯಕಾಂತ್‌ ಸಣ್ಣ ಪಟ್ಟಣದಲ್ಲಿ ವಕೀಲನಾಗಿದ್ದು, ಬಳಿಕ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಷ್ಟ್ರೀಯ ಮಹತ್ವದ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಹಲವಾರು ತೀರ್ಪುಗಳು ಮತ್ತು ಆದೇಶಗಳ ಭಾಗವಾಗಿರುವ ನ್ಯಾ.ಸೂರ್ಯಕಾಂತ್‌ 2011ರಲ್ಲಿ ಕುರುಕ್ಷೇತ್ರ ವಿವಿಯಿಂದ ಕಾನೂನಿನಲ್ಲಿ ಮಾಸ್ಟರ್ಸ್ ಪದವಿಯನ್ನು ‘ಫಸ್ಟ್ ಕ್ಲಾಸ್ ಫಸ್ಟ್’ ಆಗಿ ಗಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನ್ಯಾ.ಸೂರ್ಯಕಾಂತ್‌ ಈಗ ನಿವೃತ್ತರಾಗಿರುವ ನ್ಯಾ.ಎ.ಕೆ.ಗೋಯೆಲ್ ಅವರು ಆಗಿನ ಸಿಜೆಐ ದೀಪಕ್ ಮಿಶ್ರಾ ಅವರಿಗೆ ಬರೆದಿದ್ದ ಪತ್ರದಿಂದಾಗಿ ವಿವಾದಕ್ಕೆ ಗುರಿಯಾಗಿದ್ದರು. ಆಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಗೋಯೆಲ್ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸೂರ್ಯಕಾಂತ್‌ ಅವರ ಪದೋನ್ನತಿ ಪ್ರಸ್ತಾವವನ್ನು ಒಪ್ಪಿಕೊಂಡಿರಲಿಲ್ಲ. ಆದಾಗ್ಯೂ ನ್ಯಾ.ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಅ.3, 2018ರ ಅಧಿಸೂಚನೆಯಲ್ಲಿ ನ್ಯಾ.ಸೂರ್ಯಕಾಂತ್‌ ಅವರಿಗೆ ಪದೋನ್ನತಿಯನ್ನು ನೀಡಿತ್ತು.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ನಲ್ಲಿ ಹಲವಾರು ಗಮನಾರ್ಹ ತೀರ್ಪುಗಳನ್ನು ನೀಡಿದ್ದ ನ್ಯಾ.ಸೂರ್ಯಕಾಂತ್‌ ಅವರು ಅ.5,2018ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅವರ ಅಧಿಕಾರಾವಧಿಯು 370ನೇ ವಿಧಿ ರದ್ದತಿ, ವಾಕ್ ಸ್ವಾತಂತ್ರ್ಯ ಮತ್ತು ಪೌರತ್ವ ಹಕ್ಕುಗಳ ಕುರಿತು ತೀರ್ಪುಗಳಿಂದ ಗುರುತಿಸಲ್ಪಟ್ಟಿದೆ. ಅವರು ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ಅಮಾನತಿನಲ್ಲಿರಿಸಿ, ಸರಕಾರದ ಪರಿಶೀಲನೆಯವರೆಗೆ ಅದರಡಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸಬಾರದು ಎಂದು ನಿರ್ದೇಶನ ನೀಡಿದ್ದ ಪೀಠದ ಭಾಗವಾಗಿದ್ದರು.

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಸಮಯದಲ್ಲಿ ನ್ಯಾ.ಸೂರ್ಯಕಾಂತ್‌ ಅವರು, ಕರಡು ಮತದಾರರ ಪಟ್ಟಿಗಳಿಂದ ಕೈಬಿಡಲಾದ 65 ಲಕ್ಷ ಮತದಾರರ ವಿವರಗಳನ್ನು ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದ್ದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ವಕೀಲರ ಸಂಘಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸುವಂತೆ ಆದೇಶಿಸಿದ್ದ ಹೆಗ್ಗಳಿಕೆಯನ್ನೂ ನ್ಯಾ.ಸೂರ್ಯಕಾಂತ್‌ ಹೊಂದಿದ್ದಾರೆ.

2022ರಲ್ಲಿ ಪಂಜಾಬಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂದರ್ಭಗಳಲ್ಲಿ ನಡೆದಿದ್ದ ಭದ್ರತಾ ಉಲ್ಲಂಘನೆಯ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ನ್ಯಾ.ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದ ಪೀಠದ ಭಾಗವಾಗಿದ್ದ ನ್ಯಾ.ಸೂರ್ಯಕಾಂತ್‌, ಇಂತಹ ವಿಷಯಗಳಲ್ಲಿ ನ್ಯಾಯಾಂಗ ತರಬೇತಿ ಪಡೆದಿರುವವರ ಅಗತ್ಯವಿದೆ ಎಂದು ಹೇಳಿದ್ದರು.

ರಕ್ಷಣಾ ಪಡೆಗಳಿಗೆ ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆಯನ್ನು ಎತ್ತಿ ಹಿಡಿದಿದ್ದ ಅವರು, ದೀರ್ಘಾವಧಿ ಸೇವೆಯಲ್ಲಿ ಸಮಾನತೆ ಕೋರಿ ಸಶಸ್ತ್ರ ಪಡೆಗಳಲ್ಲಿಯ ಮಹಿಳಾ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ನ್ಯಾ.ಸೂರ್ಯಕಾಂತ್‌ ಅವರು 1967ರ ಅಲೀಗಡ ಮುಸ್ಲಿಮ್ ವಿವಿ ತೀರ್ಪನ್ನು ರದ್ದುಗೊಳಿಸಿದ್ದ ಏಳು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು. ಈ ಆದೇಶವು ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮರುಪರಿಶೀಲಿಸಲು ಮಾರ್ಗವನ್ನು ತೆರೆದಿತ್ತು.

ನ್ಯಾ.ಸೂರ್ಯಕಾಂತ್‌ ಪೆಗಾಸಸ್ ಸ್ಪೈವೇರ್ ಪ್ರಕರಣದ ವಿಚಾರಣೆ ನಡೆಸಿದ್ದ ಮತ್ತು ಕಾನೂನುಬಾಹಿರ ಕಣ್ಗಾವಲು ಆರೋಪಗಳ ಕುರಿತು ತನಿಖೆಗೆ ಸೈಬರ್ ತಜ್ಞರ ಸಮಿತಿಯನ್ನು ರಚಿಸಿದ್ದ ಪೀಠದ ಭಾಗವೂ ಆಗಿದ್ದರು. ‘ಸರಕಾರವು ಭದ್ರತೆಯ ಸೋಗಿನಲ್ಲಿ ಏನು ಬೇಕಾದರೂ ಮಾಡಲು ಉಚಿತ ಪಾಸ್ ಪಡೆಯಲು ಸಾಧ್ಯವಿಲ್ಲ’ ಎಂಬ ಪೀಠದ ಹೇಳಿಕೆಯು ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News