×
Ad

ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಯಾರು?

Update: 2025-10-06 16:59 IST

ಸಿಜೆಐ ಬಿ.ಆರ್. ಗವಾಯಿ / ರಾಕೇಶ್ ಕಿಶೋರ್ (Photo credit: indiatoday.in)

ಹೊಸದಿಲ್ಲಿ: ದೇಶದ ಅಗ್ರ ನ್ಯಾಯಾಲಯ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ಅಚ್ಚರಿಯ ಘಟನೆ ನಡೆದಿದೆ. ಹಿರಿಯ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ್ದು, ನ್ಯಾಯಾಲಯದ ಒಳಗೆ ಕೆಲ ಕ್ಷಣ ತೀವ್ರ ಗೊಂದಲ ಉಂಟಾಯಿತು.

ಘಟನೆ ನ್ಯಾಯಾಲಯ ಸಂಖ್ಯೆ 1ರಲ್ಲಿ ನಡೆದಿದ್ದು, ಸಿಜೆಐ ಗವಾಯಿ ವಿಚಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಭದ್ರತಾ ಸಿಬ್ಬಂದಿ ತಕ್ಷಣವೇ ಕ್ರಮಕೈಗೊಂಡು ವಕೀಲನನ್ನು ವಶಕ್ಕೆ ಪಡೆದರು. 

ಘಟನೆಯ ನಂತರ ಸಿಜೆಐ ಗವಾಯಿ ಶಾಂತತೆಯಿಂದ ವಿಚಾರಣೆಯನ್ನು ಮುಂದುವರೆಸಿ, “ಈ ರೀತಿಯ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಹೇಳಿದರು.

ವಕೀಲನನ್ನು ಕರೆದೊಯ್ಯುವಾಗ ಆತ “ಸನಾತನ ಕಾ ಅಪ್ಮಾನ್ ನಹಿ ಸಹೇಂಗೇ (ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ)” ಎಂದು ಕೂಗಾಡಿದ ಎಂದು ಕೋರ್ಟ್‌ನೊಳಗಿನ ಮೂಲಗಳು ತಿಳಿಸಿವೆ.

ರಾಕೇಶ್ ಕಿಶೋರ್ (71) ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲನಾಗಿದ್ದು, ನ್ಯಾಯಾಲಯದ ಅಧಿಕೃತ Proximity Card ಹೊಂದಿದ್ದ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.

ಘಟನೆಯ ನಿಖರ ಕಾರಣ ಸ್ಪಷ್ಟವಾಗಿಲ್ಲ. ಆದರೆ ವರದಿಗಳ ಪ್ರಕಾರ, ಕಳೆದ ಸೆಪ್ಟೆಂಬರ್ 16ರಂದು ನಡೆದ ವಿಚಾರಣೆಯ ವೇಳೆ ಸಿಜೆಐ ಗವಾಯಿ ನೀಡಿದ್ದ ಹೇಳಿಕೆಯು ವಕೀಲನ ಅಸಮಾಧಾನಕ್ಕೆ ಕಾರಣವಾಗಿತ್ತು.

ಆ ಸಂದರ್ಭದಲ್ಲಿ ಅರ್ಜಿದಾರ “ಮೊಘಲ್ ಆಕ್ರಮಣದ ಸಮಯದಲ್ಲಿ ವಿಷ್ಣುವಿನ ವಿಗ್ರಹವನ್ನು ಹಾನಿಗೊಳಿಸಲಾಗಿದೆ; ಅದನ್ನು ಪುನಃಸ್ಥಾಪಿಸಬೇಕು” ಎಂದು ಮನವಿ ಸಲ್ಲಿಸಿದ್ದ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ, “ನೀವು ವಿಷ್ಣುವಿನ ಭಕ್ತರೆಂದರೆ ಈಗಲೇ ಹೋಗಿ ದೇವರನ್ನು ಪ್ರಾರ್ಥಿಸಿ. ಇದು ಪುರಾತತ್ತ್ವ ಇಲಾಖೆ ಅಧೀನದ ಸ್ಥಳ; ಅನುಮತಿ ಎಎಸ್‌ಐಯಿಂದಲೇ ಬರಬೇಕು. ಕ್ಷಮಿಸಿ, ಈ ಅರ್ಜಿಯನ್ನು ವಜಾಗೊಳಿಸುತ್ತೇವೆ” ಎಂದು ಹೇಳಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಕ್ಕೀಡಾದ ನಂತರ, ಸಿಜೆಐ ಗವಾಯಿ “ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದರು.

ಘಟನೆಯ ನಂತರ ಸುಪ್ರೀಂ ಕೋರ್ಟ್‌ನೊಳಗಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ವಕೀಲರು ಹಾಗೂ ಸಿಬ್ಬಂದಿಯ ಪ್ರವೇಶಕ್ಕೆ ಹೆಚ್ಚುವರಿ ತಪಾಸಣಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News