×
Ad

ವಿಶ್ವವು ನೂತನ ಇಂಧನ ವ್ಯವಸ್ಥೆಗೆ ಸ್ಥಿತ್ಯಂತರಗೊಂಡಿದೆ; ಆದರೆ ಭಾರತ ಮಾತ್ರ ಪುರಾತನ ಆರ್ಥಿಕ ಚಿಂತನೆಯಲ್ಲೇ ಮುಳುಗಿದೆ: ರಾಹುಲ್ ಗಾಂಧಿ

Update: 2025-02-06 20:26 IST

Photo Credit: PTI 

ಹೊಸದಿಲ್ಲಿ: “ವಿಶ್ವವು ನೂತನ ಇಂಧನ ವ್ಯವಸ್ಥೆಗೆ ಸ್ಥಿತ್ಯಂತರಗೊಂಡಿದ್ದು, ಇಲ್ಲಿ ಇಲೆಕ್ಟ್ರಿಕ್ ಮೋಟಾರ್ ಗಳು, ಬ್ಯಾಟರಿಗಳು ಹಾಗೂ ಆಪ್ಟಿಕ್ ಗಳು ಬಹಳ ಮಹತ್ವದ ತಂತ್ರಜ್ಞಾನಗಳಾಗಿವೆ. ಹೀಗಿದ್ದೂ, ಭಾರತ ಮಾತ್ರ ರಿಲಯನ್ಸ್ ಮತ್ತು ಅಂಬಾನಿಯಂತಹ ಏಕಸ್ವಾಮ್ಯ ಕಂಪನಿಗಳು ನಿಯಂತ್ರಿಸುತ್ತಿರುವ ಪುರಾತನ ಆರ್ಥಿಕ ಚಿಂತನೆಯಲ್ಲೇ ಮುಳುಗಿದೆ,” ಎಂದು ಗುರುವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂಧನವು ಖಾಸಗಿಯವರ ಬಳಿಯಾಗಲಿ ಅಥವಾ ಸರಕಾರದ ಬಳಿಯಾಗಲಿ ಸಾಂದ್ರೀಕೃತಗೊಳ್ಳದಿದ್ದರೆ, ಅದು ಎಲ್ಲವನ್ನೂ ಪರಿವರ್ತಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಹುಲ್ ಗಾಂಧಿ ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, ಇದರೊಂದಿಗೆ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಇತ್ತೀಚೆಗೆ ನಾಗಾಲ್ಯಾಂಡ್ ವಿದ್ಯಾರ್ಥಿಗಳೊಂದಿಗೆ ನಡೆಸಿರುವ ಸಂವಾದದ ವೀಡಿಯೊವನ್ನೂ ಹಂಚಿಕೊಂಡಿದ್ದಾರೆ.

“ಇತ್ತೀಚೆಗೆ ನಾನು ನಾಗಾಲ್ಯಾಂಡ್ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದೆ ಹಾಗೂ ನಮಗೆ ಅವರ ಸಂಸ್ಕೃತಿಯ ಬಗ್ಗೆ ಎಷ್ಟು ಕಲಿಸಲಾಗಿದೆ ಎಂಬುದು ಅರ್ಥವಾಯಿತು. ಅದು ಶಿಕ್ಷಣವಲ್ಲ; ಬದಲಿಗೆ ಅದು ಅಳಿಸುವಿಕೆಯಾಗಿದೆ. ಈಶಾನ್ಯ ಭಾರತವು ಭಾರತದ ದೂರದೃಷ್ಟಿ ಹಾಗೂ ಅಭಿವೃದ್ಧಿಯ ಕೇಂದ್ರ ಭಾಗವಾಗಬೇಕಿದೆ” ಎಂದು ಅವರು ಹೇಳಿದ್ದಾರೆ.

“ಚೀನಾ ಹಾಗೂ ಅಮೆರಿಕ ವಿದ್ಯುತ್ ಚಾಲಿತ ವಾಹನಗಳು, ಕೃತಕ ಬುದ್ಧಿಮತ್ತೆ ಹಾಗೂ ಬ್ಯಾಟರಿ ತಂತ್ರಜ್ಞಾನದಲ್ಲಿ ಮುಂದಿದ್ದರೆ, ನಮ್ಮ ನೀತಿಗಳು ಮಾತ್ರ ಈಗಲೂ ಪಳೆಯುಳಿಕೆ ಇಂಧನಗಳ ಪರವಾಗಿದೆ” ಎಂದು ಅವರು ಬೊಟ್ಟು ಮಾಡಿದ್ದಾರೆ.

“ಇದು ಕೇವಲ ಆರ್ಥಿಕ ಸ್ಥಿತ್ಯಂತರವಲ್ಲ. ಇದು ಶಕ್ತಿಯ ಸ್ಥಿತ್ಯಂತರ. ಉದಾಹರಣೆಗೆ ಕಾರು ತೆಗೆದುಕೊಳ್ಳಿ . ಸಾಂಪ್ರದಾಯಿಕ ಎಂಜಿನ್ ಗಳು ಕೇಂದ್ರೀಕೃತ ಶಕ್ತಿ ಮೂಲಗಳಾಗಿವೆ. ಆದರೆ, ವಿದ್ಯುತ್ ಚಾಲಿತ ವಾಹನಗಳಲ್ಲಿ ಶಕ್ತಿಯು ವಿಕೇಂದ್ರೀಕೃತವಾಗಿದೆ. ಬ್ಯಾಟರಿಗಳು ಹಾಗೂ ಮೋಟಾರ್ ಗಳು ಇಡೀ ವಿನ್ಯಾಸವನ್ನು ಮರು ರೂಪಿಸಿವೆ. ಇಂಧನ ಹಾಗೂ ಉದ್ಯಮದಲೂ ಇದೇ ಆಗುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶಕ್ತಿಯು ಕೆಲವೇ ಕೈಗಳಲ್ಲಿ ಕೇಂದ್ರೀಕೃತವಾಗದೆ ಹೋದಾಗ, ಅದು ಉದ್ಯಮವಿರಲಿ ಅಥವಾ ಸರಕಾರವಿರಲಿ, ಅದು ಎಲ್ಲವನ್ನೂ ಪರಿವರ್ತಿಸುತ್ತದೆ. ನಮ್ಮ ಆರ್ಥಿಕತೆ, ರಾಜಕಾರಣ ಹಾಗೂ ಯುದ್ಧದ ಸ್ವರೂಪವನ್ನೂ ಕೂಡಾ ಎಂದು ಅವರು ಪ್ರತಿಪಾದಿಸಿದ್ದಾರೆ.

“ನಾವು ಈ ಸಂವಾದಗಳನ್ನು ವಿಶ್ವವಿದ್ಯಾಲಯಗಳು ಹಾಗೂ ಯುವಕರ ಮನಸ್ಸಿನಲ್ಲಿ ತರಬೇಕಾದ ಅಗತ್ಯವಿದೆ. ಯಾಕೆಂದರೆ, ನಾವು ದೃಷ್ಟಿಕೋನ ಸ್ಥಿತ್ಯಂತರದ ಅಂಚಿನಲ್ಲಿದ್ದೇವೆ. ನಾವು ಪರಿವರ್ತನೆಯಾಗದಿದ್ದರೆ, ನಾವು ಉದ್ಯಮದಲ್ಲಿ ಮಾತ್ರ ಹಿಂದೆ ಬೀಳುವುದಿಲ್ಲ. ಬದಲಿಗೆ, ನಾವು ನಮ್ಮ ಭವಿಷ್ಯದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳ್ಲಿದ್ದೇವೆ. ಅದನ್ನು ರೂಪಿಸುವ ಮೊದಲ ಹೆಜ್ಜೆಯೆಂದರೆ, ಅದನ್ನು ಅರ್ಥ ಮಾಡಿಕೊಳ್ಳುವುದು,” ಎಂದು ಅವರು ಹೇಳಿದ್ದಾರೆ.

ಆ ವೀಡಿಯೊದಲ್ಲಿ, ನಾವು ನಮ್ಮ ರೂಪದ ಕಾರಣಕ್ಕೆ ಜನಾಂಗೀಯ ತಾರತಮ್ಯವನ್ನು ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ರಾಹುಲ್ ಗಾಂಧಿಗೆ ಹೇಳುತ್ತಿರುವುದು ಕಂಡು ಬರುತ್ತದೆ. ಅದಕ್ಕೆ ಪ್ರತಿಯಾಗಿ, ಅದು ನಿರ್ಲಕ್ಷ್ಯದ ಫಲಿತಾಂಶವಾಗಿದೆ ಎಂದು ರಾಹುಲ್ ಗಾಂಧಿ ಹೇಳುವುದನ್ನು ನೋಡಬಹುದಾಗಿದೆ.

ಇಲೆಕ್ಟ್ರಿಕ್ ಮೋಟಾರ್ ಗೆ ಸ್ಥಿತ್ಯಂತರಗೊಳ್ಳುವುದರ ಕುರಿತು ಇತ್ತೀಚೆಗೆ ತಾವು ಲೋಕಸಭೆಯನ್ನುದ್ದೇಶಿಸಿ ಮಾಡಿದ ಭಾಷಣದ ಕುರಿತು ವಿದ್ಯಾರ್ಥಿಗಳು ಪ್ರಶ್ನಿಸಿದಾಗ, ಹೇಗೆ ವಿದ್ಯುತ್ ಚಾಲಿತ ವಾಹನವು ಪೆಟ್ರೋಲ್/ಡೀಸೆಲ್ ಕಾರಿಗಿಂತ ಕಷ್ಟ ಎಂದು ವಿವರಿಸಿದ್ದು, ಅದು ಶಕ್ತಿಯನ್ನು ವಿಕೇಂದ್ರೀಕರಣಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ವಿಫಲಗೊಂಡಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ದಲಿತರು, ಆದಿವಾಸಿಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಪರ್ಯಾಯ ದೃಷ್ಟಿಕೋನವನ್ನು ಮಂಡಿಸಿದ್ದರು. ಇದರೊಂದಿಗೆ ಇಂಧನ ಹಾಗೂ ಆಟೊಮೊಬೈಲ್ ಕ್ರಾಂತಿಯನ್ನು ಚೀನಾಗೆ ಬಿಟ್ಟುಕೊಡದಂತೆ ಖಾತರಿ ಪಡಿಸಬೇಕು ಎಂದು ಆಗ್ರಹಿಸಿದ್ದರು.

ಹೀಗಿದ್ದೂ, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಾಗಲಿ ಅಥವಾ ಈಗಿನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವಾಗಲಿ ನಿರುದ್ಯೋಗವನ್ನು ಪರಿಹರಿಸಲು ಸಾಧ್ಯವಾಗಿಲ್ಲ. ನಿರುದ್ಯೋಗದ ಕುರಿತು ಯುವಕರಿಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟದ ಸರಕಾರದಲ್ಲಿ ರಾಷ್ಟ್ರಪತಿ ಭಾಷಣ ಹೇಗಿರುತ್ತಿತ್ತು ಎಂಬುದರ ಸುತ್ತ ತಮ್ಮ ಭಾಷಣವನ್ನು ಕೇಂದ್ರೀಕರಿಸಿದರು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ
https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News