×
Ad

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಈ ವರ್ಷ ಉದ್ಘಾಟನೆ

Update: 2024-04-06 09:49 IST

Photo: twitter.com/VivekSi85847001

ಹೊಸದಿಲ್ಲಿ: ಭಾರತೀಯ ರೈಲ್ವೆ ನಿರ್ಮಿಸಿದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಈ ವರ್ಷ ಉದ್ಘಾಟನೆಗೆ ಸಜ್ಜಾಗಿದೆ. ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯನ್ನು ಹೊಸ ಸರ್ಕಾರದ 100 ದಿನಗಳ ಕ್ರಿಯಾಯೋಜನೆಯಡಿ ಉದ್ಘಾಟನೆ ಮಾಡಲು ಸಿದ್ಧತೆ ನಡೆದಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಕಾಟ್ರಾ- ಬನಿಹಾಳ್ ಸೆಕ್ಷನ್ ನಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಈ ವರ್ಷ ಈ ಸೇತುವೆ ಮೂಲಕ ರೈಲು ಸಂಚಾರ ಆರಂಭದ ನಿರೀಕ್ಷೆ ಇದೆ.

ಈ ಸೇತುವೆಯನ್ನು ನದಿಯ ತಳಹಂತದಿಂದ 35 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದ್ದು, ಇದು ಪ್ಯಾರೀಸ್ ನ ಐಫೆಲ್ ಟವರ್ ಗಿಂತಲೂ ಎತ್ತರವಾಗಿದೆ. ಹಿಮಾಲಯ ಪರಿಸರದಲ್ಲಿರುವ ಈ ಸೇತುವೆಯನ್ನು ಭಾರತದ ಎಂಜಿನಿಯರಿಂಗ್ ಸಾಧನೆ ಎಂದು ಬಣ್ಣಿಸಲಾಗಿದ್ದು, ಇದು ಜಮ್ಮು & ಕಾಶ್ಮೀರವನ್ನು ಭಾರತದ ಇತರ ಪ್ರದೇಶಗಳ ಜತೆ ಸಂಪರ್ಕಿಸುವ ಸೇತುವೆಯಾಗಿದೆ.

ಈ ಸೇತುವೆ 93 ಡೆಕ್ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಂದರ ತೂಕ 85 ಟನ್. ಎರಡೂ ಬದಿಯ ದೈತ್ಯ ಉಕ್ಕಿನ ಕಮಾನುಗಳ ಮೂಲಕ ಇದನ್ನು ಏಕಕಾಲಕ್ಕೆ ಅಳವಡಿಸಲಾಗಿದೆ. ಇದರ ಮುಖ್ಯ ಕಮಾನಿನ ಉದ್ದ 467 ಮೀಟರ್ ಆಗಿದ್ದು, ಇದು ಅತಿ ಉದ್ದದ ಕಮಾನು ಎನ್ನಲಾಗಿದೆ. 467 ಮೀಟರ್ ಉದ್ದದ ಕಮಾನುಗಳನ್ನು ಜೋಡಿಸುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು ಎಂದು ಭಾರತೀಯ ರೈಲ್ವೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News